ಬೆಂಗಳೂರು : ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿ ನೇರ ಕಾರಣ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ನಾಯಕರು ನಡೆಸುತ್ತಿರೋ ಪ್ರಜಾಪ್ರಭುತ್ವ ಉಳಿಸಿ ಹೋರಾಟವನ್ನು ವ್ಯಂಗ್ಯ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ರಾಜ್ಯ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ.
ಈ ಬಗ್ಗೆ ಟ್ವೀಟ್ ಮೂಲಕ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಕುಟುಕಿದ್ದು, “ಕುಮಾರಸ್ವಾಮಿ ಅವರೇ ಆಡಳಿತ ಪಕ್ಷಕ್ಕೆ ಬೇರೆ ಪಕ್ಷದ ಶಾಸಕರು ಸ್ವಯಂ ಸೇರುವುದಕ್ಕೂ ಸಂವಿಧಾನ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಆಪರೇಷನ್ ಕಮಲದ ಮೂಲಕ ಚುನಾಯಿತ ಸರ್ಕಾರವನ್ನು ಕೆಡವುದಕ್ಕೂ ಇರುವ ವ್ಯತ್ಯಾಸ ಗೊತ್ತಿಲ್ಲದಷ್ಟು ಅತಿಮುಗ್ದರಾಗಿ ಬಿಟ್ಟಿರಾ” ಎಂದು ಪ್ರಶ್ನಿಸಿದೆ.
ಮತ್ತೊಂದು ಟ್ವೀಟ್ ನಲ್ಲಿ.. “ಕಾಂಗ್ರೆಸ್ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಕುರ್ಚಿ ಮೇಲೆ ಕೂತು ಅಧಿಕಾರ ನಡೆಸುವಾಗ ನಿಮಗೆ ಕಾಂಗ್ರೆಸ್ ಪಕ್ಷದ ನೈತಿಕತೆ ಚೆನ್ನಾಗಿತ್ತು. ಅಧಿಕಾರ ಇಲ್ಲದಿದ್ದಾಗ ನೈತಿಕತೆ ಪ್ರಶ್ನೆ ಬರುತ್ತದೆಯೇ? ರಾಜ್ಯ ಸಂಕಷ್ಟದಲ್ಲಿರುವಾಗ ಅದೃಶ್ಯರು ಅಪ್ರಸ್ತುತರು ಆಗಿರುವ ನಿಮ್ಮ ಪಕ್ಷದ ನೈತಿಕತೆ ಏನು” ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.