ಮಾಜಿ ಸಚಿವ ಯು. ಟಿ. ಖಾದರ್ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಗುಪ್ತಚರ ಇಲಾಖೆ ನೀಡಿದ್ದು, ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಗೃಹಸಚಿವರು ಯು.ಟಿ.ಖಾದರ್ ಗೆ ಭದ್ರತೆ ಹೆಚ್ಚಿಸಲು ಆದೇಶ ನೀಡಿದ್ದಾರೆ. ಗುಪ್ತಚರ ಇಲಾಖೆ ಈ ಮಾಹಿತಿ ನೀಡುತ್ತಿದ್ದಂತೆ ಸ್ವತಃ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ಯು. ಟಿ. ಖಾದರ್ ಜೊತೆ ದೂರವಾಣಿ ಮೂಲಕ ಈ ಕುರಿತು ಮಾತುಕತೆ ನಡೆಸಿದ್ದಾರೆ.
ಗುಪ್ತಚರ ಇಲಾಖೆ ಯು. ಟಿ. ಖಾದರ್ ಹತ್ಯೆಗೆ ಸಂಚು ರೂಪಿಸುವ ಮಾಹಿತಿ ಪಡೆದಿತ್ತು. ಬಳಿಕ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದು, ಎಸಿಪಿಯೊಬ್ಬರು ಮಂಗಳೂರಿನಲ್ಲಿರುವ ಖಾದರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮಾಜಿ ಸಚಿವ ಯು. ಟಿ. ಖಾದರ್‌ಗೆ ಭದ್ರತೆ ನೀಡಬೇಕು ಎಂದು ಗೃಹ ಸಚಿವರು ಮಂಗಳೂರು ಪೊಲೀಸರಿಗೆ ಆದೇಶ ನೀಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಖಾದರ್ ಹೋರಾಟ ಮಾಡಿದ್ದು ಜೀವ ಬೆದರಿಕೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.








