ಜೆಡಿಎಸ್ ಪಕ್ಷವನ್ನ ನೋಡಿ ಕಾಂಗ್ರೆಸ್ ಕಲಿಯಬೇಕಿದೆ : ಆರ್.ಅಶೋಕ್
ಬೆಂಗಳೂರು : ವೆಂಟಿಲೇಟರ್ ಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಆರೋಪದ ಕುರಿತು ಕಂದಾಯ ಸಚಿವ ಆರ್.ಅಶೋಕ್ ಅವರು ಪ್ರತಿಕ್ರಿಯೆ ನೀಡಿದ್ದು,ಕಾಂಗ್ರೆಸ್ ನವರು ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಕಂದಾಯ ಸಚಿವರು ಇಂದು ಬೆಂಗಳೂರು ದಕ್ಷಿಣ ವಲಯದ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಕಾಂಗ್ರೆಸ್ ಆರೋಪದ ಬಗ್ಗೆ ಮಾತನಾಡಿದ ಅವರು, ಇಂಥ ಸಂಕಷ್ಟದ ವೇಳೆ ಲೆಕ್ಕ ಕೊಡಿ ಎಂದು ಕೇಳುವುದು ಸರಿಯಲ್ಲ. ಸಲಕರಣೆಗಳ ಬೆಲೆ ಬದಲಾಗುತ್ತಿರುತ್ತದೆ. ಪ್ರಸಕ್ತ ದರದಂತೆ ಖರೀದಿ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರು ಆತುರ ಬಿದ್ದು ಗೋತ್ರ ಕೆಡಿಸಿಕೊಳ್ಳೋದು ಬೇಡ. ಲೆಕ್ಕ ಕೇಳಲು ಒಂದು ಸಮಯ ಬರುತ್ತೆ, ಆಗ ಕೇಳಿ. ಅಧಿವೇಶನ ವೇಳೆ ನಿಮ್ಮ ಮನೆಮನೆಗೆ ಲೆಕ್ಕ ಕಳಿಸುತ್ತೇವೆ. ಆಗ ನೀವು ಲೆಕ್ಕನಾದರೂ ಕೇಳಿ ನಾಟಕವಾದರೂ ಮಾಡಿ. 400-500 ಕೋಟಿ ರೂ.ಗಷ್ಟೇ ವೈದ್ಯಕೀಯ ಸಲಕರಣೆಗಳ ಖರೀದಿ ಮಾಡಲಾಗಿದ್ದು, ಕಾಂಗ್ರೆಸ್ ಆರೋಪದಂತೆ 3000 ಸಾವಿರ ಕೋಟಿ ರೂ. ವೆಚ್ಚ ಮಾಡಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.








