ಬೆಂಗಳೂರು: ನಿರೀಕ್ಷೆಯಂತೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಐಎಎಸ್ ಅಧಿಕಾರಿ ದಿ. ಡಿ.ಕೆ ರವಿ ಪತ್ನಿ ಕುಸುಮಾಗೆ ಆರ್.ಆರ್ ನಗರ ಟಿಕೆಟ್ ನೀಡುವುದು ಬಹುತೇಕ ಪಕ್ಕಾ ಆಗಿದೆ.
ಕೆಪಿಸಿಸಿಯಿಂದ ಹೈಕಮಾಂಡ್‍ಗೆ ಕಳಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಆರ್.ಆರ್ ನಗರಕ್ಕೆ ಕುಸುಮಾ ಒಬ್ಬರ ಹೆಸರನ್ನು ಮಾತ್ರ ಶಿಫಾರಸು ಮಾಡಲಾಗಿದೆ. ಹೀಗಾಗಿ ಒಂದೆರೆಡು ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್‍ನಿಂದ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ.
ಮೈಸೂರಿನಲ್ಲಿ ಈ ಬಗ್ಗೆ ಸುಳಿವು ನೀಡಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಆರ್.ಆರ್ ನಗರಕ್ಕೆ ಕುಸುಮಾ ಅವರ ಒಬ್ಬರ ಹೆಸರನ್ನು ಮಾತ್ರ ಕೆಪಿಸಿಸಿಯಿಂದ ಶಿಫಾರಸು ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರೇ ಈ ವಿಚಾರ ಖಚಿತಪಡಿಸಿರುವುದರಿಂದ ಕುಸುಮಾ ಅವರಿಗೆ ಆರ್.ಆರ್ ನಗರ ಟಿಕೆಟ್ ಸಿಗುವುದು ಪಕ್ಕಾ ಎನ್ನಲಾಗಿದೆ.
ಆದರೆ, ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕುಸುಮಾ ಆರ್.ಆರ್ ನಗರ ಅಭ್ಯರ್ಥಿ ಎಂಬುದರ ಬಗ್ಗೆ ಸಿದ್ದರಾಮಯ್ಯ ಹೇಳಿರುವ ಬಗ್ಗೆ ಮಾಹಿತಿ ಗೊತ್ತಿಲ್ಲ ತಿಳಿದು ಮಾತನಾಡುತ್ತೇನೆ ಎಂದಿದ್ದಾರೆ.
ಶಿರಾಗೆ ಅಮ್ಮಾಜಮ್ಮಗೆ ಜೆಡಿಎಸ್ ಟಿಕೆಟ್
ಶಾಸಕ ಬಿ.ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗಿದೆ.
ದಿವಂಗತ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಜೆಡಿಎಸ್ ಶಿರಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಮುಖಂಡರ ಸಭೆಯ ಬಳಿಕ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅಧಿಕೃತ ಘೋಷಣೆ ಮಾಡಿದ್ದಾರೆ.
ಅಮ್ಮಾಜಮ್ಮಗೆ ಟಿಕೆಟ್ ನೀಡುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಆರ್.ಆರ್ ನಗರ ಕ್ಷೇತ್ರಕ್ಕೆ ಮೂವರು ಯುವಕರ ಹೆಸರು ಚಾಲನೆಯಲ್ಲಿದೆ. ಅಕ್ಟೋಬರ್ 8ರಂದು ಸಭೆ ಸೇರಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ಅಮ್ಮಾಜಮ್ಮಗೆ ಜೆಡಿಎಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಅವರಿಗೆ ಶಾಂಕಿಂಗ್ ಸುದ್ದಿ ಬಂದಿದೆ. ತುಮಕೂರಿನ ಆಸ್ಪತ್ರೆಯಲ್ಲಿ ನಡೆದ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ತಾಯಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಯಾವುದೇ ಲಕ್ಷಣಗಳು ಇಲ್ಲ ಎಂದು ಎಂದು ಸತ್ಯನಾರಾಯಣ ಪುತ್ರ ಬಿ.ಸತ್ಯಪ್ರಕಾಶ್ ತಿಳಿಸಿದ್ದಾರೆ.








