ಬೆಂಗಳೂರು : ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಏರಿದ ನಂತರ ಮಿಂಚಿನಂತೆ ಸಂಚರಿಸುತ್ತಿದ್ದಾರೆ. ಒಂದೆಡೆ ಪಕ್ಷ ಬಿಟ್ಟು ಹೋದವರನ್ನು ಘರ ವಾಪಾಸಿ ಕಾರ್ಯಕ್ರಮದ ಮೂಲಕ ಪಕ್ಷಕ್ಕೆ ಕರೆ ತರುತ್ತಿದ್ದಾರೆ. ಇನ್ನೊಂದೆಡೆ ಎಲ್ಲಾ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಯಲ್ಲಿ ಗುರುವಾರ ಮುಸ್ಲಿಂ ಮುಖಂಡರ ನಿಯೋಗ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು.
ನಿಯೋಗದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯಸಭೆಯ ಮಾಜಿ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಸಲೀಂ ಅಹಮದ್, ರಾಜ್ಯಸಭಾ ಸದಸ್ಯ ಡಾ.ನಾಸಿರ್ ಹುಸೇನ್, ಶಾಸಕ ತನ್ವೀರ್ ಸೇಠ್, ಜಮೀರ್ ಅಹ್ಮದ್ ಖಾನ್, ಎನ್.ಎ ಹ್ಯಾರಿಸ್, ರಹೀಮ್ ಖಾನ್, ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯ ನಾಸೀರ್ ಅಹಮದ್, ಅಬ್ದುಲ್ ಜಬ್ಬಾರ್ ಇದ್ದರು. ಅಲ್ಲದೆ ಭೇಟಿ ಸಮಯದಲ್ಲಿ ವಿಧಾನಪರಿಷತ್ ಚುನಾವಣೆಗೆ ಟಿಕೆಟ್ ವಿಚಾರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಮನ್ನಣೆ ನೀಡಬೇಕು ಎಂದು ಎಲ್ಲಾ ನಾಯಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಇಂದು ಸಹ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್.ಎಂ ರೇವಣ್ಣ ಅವರ ಮಹಾಲಕ್ಷ್ಮಿಪುರ ನಿವಾಸದಲ್ಲಿ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ನಾಯಕರೊಂದಿಗಿನ ಉಪಾಹಾರ ಕೂಟದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಜೆ. ಹುಚ್ಚಪ್ಪ, ಪ್ರೊ. ಬಿ.ಕೆ ರವಿ, ಕಾಂತರಾಜು, ಹನುಮಂತೇಗೌಡ ಇದ್ದರು. ಇದೆ ವೇಳೆ ಹಿಂದುಳಿದ ವರ್ಗಕ್ಕೆ ವಿಧಾನ ಪರಿಷತ್ ಟಿಕೆಟ್ ನೀಡಬೇಕು ಎಂದು ಒತ್ತಾಯ ಕೇಳಿ ಬಂದಿದೆ ಎಂದು ಹೇಳಾಗಿದೆ.








