Congress | ಭ್ರಷ್ಟಾಚಾರ ವಿಷಯ ಬಂದಾಗ ಸಿಎಂ ಮೂಕ ಬಸಪ್ಪನಂತಾಗುತ್ತಾರೆ
ಬೆಂಗಳೂರು : ಭ್ರಷ್ಟಾಚಾರದ ವಿಷಯ ಬಂದಾಗ ಸಿಎಂ ಬಸವರಾಜ ಬೊಮ್ಮಾಯಿ ಅವರು ತಲೆ ಆಡಿಸುವ “ಮೂಕ ಬಸಪ್ಪ”ನಂತಾಗುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಕುಟುಕಿದೆ.
ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ನಾನಾ ಅವಾಂತರಗಳು ಸೃಷ್ಠಿಯಾಗುತ್ತಿವೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಗರಂ ಆಗಿದೆ.
ಈ ಕುರಿತು ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಭ್ರಷ್ಟಾಚಾರದ ವಿಷಯ ಬಂದಾಗ ಸಿಎಂ ಬಸವರಾಜ ಬೊಮ್ಮಾಯಿ ಅವರು ತಲೆ ಆಡಿಸುವ “ಮೂಕ ಬಸಪ್ಪ”ನಂತಾಗುತ್ತಾರೆ! ಸಚಿವ ಮುನಿರತ್ನರ ವಿರುದ್ಧ ಕಮಿಷನ್ ಆರೋಪ ಬಂದರೆ ಮೌನ ಸಮರ್ಥನೆ.
ಸಚಿವ ಆನಂದ್ ಸಿಂಗ್ರ ಭೂಕಬಳಿಕೆ ವಿಷಯಕ್ಕೆ ಮೌನ ವಹಿಸುತ್ತಾರೆ. ಶಿಕ್ಷಣ ಇಲಾಖೆಯ ಭ್ರಷ್ಟಾಚಾರಕ್ಕೆ ಮಾತಾಡುವುದಿಲ್ಲ. ಕುರ್ಚಿಗಾಗಿ ಭ್ರಷ್ಟಾಚಾರಕ್ಕೆ ಬೆಂಬಲವೇ ಎಂದು ಪ್ರಶ್ನಿಸಿದೆ.

ಮಳೆಯಿಂದ ಬೆಂಗಳೂರು ನಗರ ಮುಳುಗಿ ಮೂರು ದಿನ ಕಳೆದ ಮೇಲೆ ಮಳೆ ಹಾನಿ ಪ್ರದೇಶದ ವೀಕ್ಷಣೆಗೆ ಹೋಗುತ್ತಿರುವ ಬಸವರಾಜ ಬೊಮ್ಮಾಯಿ ಅವರೇ, ಬೋಟ್ನಲ್ಲಿ ಹೋಗ್ತಿದೀರಾ, ಡ್ರೋನ್ನಲ್ಲಿ ನೋಡ್ತಿದೀರಾ!? ಕಾಂಗ್ರೆಸ್ ಚಾಟಿ ಬೀಸಿದ ಮೇಲೆ ಸಿಎಂಗೆ ಮಳೆ ಹಾನಿ ವೀಕ್ಷಿಸಲು ಜ್ಞಾನೋದಯವಾಗಿದೆ. ಯಾವುದಾದರೂ ಸಿನೆಮಾ ಪ್ರದರ್ಶನವಿದ್ದಿದ್ರೆ ತಕ್ಷಣ ಹೋಗಿರುತ್ತಿದ್ದರು!
ಬೆಂಗಳೂರು ಮುಳುಗಿ 3 ದಿನ ಕಳೆದ ಮೇಲೆ ಹಾನಿ ವೀಕ್ಷಿಸಲು ಮುಂದಾದ ಮುಖ್ಯಮಂತ್ರಿಗಳೇ. ನೀವು ಎಚ್ಚರಾಗಲು ಕಾಂಗ್ರೆಸ್ ಪಕ್ಷ ಧ್ವನಿ ಎತ್ತಬೇಕಾಯ್ತೆ? ಸ್ವಯಂಪ್ರೇರಣೆಯ ಕಾಳಜಿ ನಿಮಗೆ ಇಲ್ಲವಾಯ್ತೆ? ಪರಿಹಾರ ಕ್ರಮಗಳಲ್ಲಿ 50% ಕಮಿಷನ್ ಅಡ್ಜಸ್ಟ್ಮೆಂಟ್ಗೆ ಈ ವೀಕ್ಷಣೆ ನಾಟಕವೇ? ಅಥವಾ 50% ಕಮಿಷನ್ನಿನ ಪ್ರತಿಫಲವನ್ನು ವೀಕ್ಷಿಸಲೇ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.








