ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ಇಡೋದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡಬಾರದು ಎಂದು ಕೈ ಕಲಿಗಳ ಪಟ್ಟುಹಿಡಿದಿದ್ದಾರೆ. ಕಾಂಗ್ರೆಸ್ ನಾಯಕರು, ವೀರ್ ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಅವರು ದೇಶಕ್ಕಾಗಿ ಯಾವುದೇ ತ್ಯಾಗ ಮಾಡಿಲ್ಲ ಎಂದು ಹೇಳುತ್ತಾ ಬಂದಿದ್ದಾರೆ. ಅಲ್ಲದೆ ಯಲಹಂಕದ ಮೇಲ್ಸೇತುವೆಗೆ ಕನ್ನಡಿಗರ ಹೆಸರಿಡಲು ಒತ್ತಾಯಿಸಿದ್ದಾರೆ.
ಇದಕ್ಕೆ ರಾಜ್ಯ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಕಾಂಗ್ರೆಸ್ ನಾಯಕರ ನಡೆಯನ್ನು ಖಂಡಿಸುತ್ತಿದ್ದಾರೆ. ಅಲ್ಲದೆ ನೆಹರು ಕುಟುಂಬದ ಹೆಸರಿಡುವಾಗ ನಿಮಗೆ ಕನ್ನಡಿಗರು ನೆನಪಾಗಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ವ್ಯಾಪ್ತಿಯಲ್ಲಿ ಒಂದು ಬೋರ್ಡ್ ಪತ್ತೆಯಾಗಿದ್ದು, ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ನಗರದ ರಾಜರಾಜೇಶ್ವರಿ ನಗರದ ವ್ಯಾಪ್ತಿಯಲ್ಲಿ ‘ದೊಡ್ಡ ಆಲಹಳ್ಳಿ ಕೆಂಪೇಗೌಡ ರಸ್ತೆ’ ಎಂಬ ಬೋರ್ಡ್ಗಳು ರಾರಾಜಿಸುತ್ತಿವೆ. ಹಾಗಾದ್ರೆ ‘ದೊಡ್ಡ ಆಲಹಳ್ಳಿ ಕೆಂಪೇಗೌಡ’ ಯಾರು..? ಇವರು ದೇಶಕ್ಕಾಗಿ ಹೋರಾಟ ಮಾಡಿದವರಾ..? ಇಲ್ಲಾ ರಾಜ್ಯಕ್ಕಾಗಿ ಏನಾದರೂ ಕೆಲಸ ಮಾಡಿದ್ದಾರಾ ಎಂಬೋದನ್ನ ನೋಡೋದಾದ್ರೆ ಇದಕ್ಕೆ ಸಿಗೋ ಉತ್ತರ, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್’.!
ಹೌದು..! ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್. ಯಾಕೆಂದರೇ ‘ದೊಡ್ಡ ಆಲಹಳ್ಳಿ ಕೆಂಪೇಗೌಡ’ ಬೇರ‍್ಯಾರು ಅಲ್ಲ ಅವರು, ಕಾಂಗ್ರೆಸ್ ಕಟ್ಟಪ್ಪ ಡಿ.ಕೆ.ಶಿವಕುಮಾರ್ ಅವರ ತಂದೆ.!
ಇದೇ ಈಗ ಚರ್ಚೆಗೆ ಗ್ರಾಸವಾಗಿದ್ದು, ಡಿ.ಕೆ.ಶಿವಕುಮಾರ್ ಅವರ ತಂದೆ ‘ದೊಡ್ಡ ಆಲಹಳ್ಳಿ ಕೆಂಪೇಗೌಡ’ ಯಾವ ಸಾಧನೆ ಮಾಡಿದ್ದಾರೆಂದು ರಾಜರಾಜೇಶ್ವರಿ ನಗರದ ರಸ್ತೆಗೆ ಅವರ ಹೆಸರಿಟ್ಟಿದ್ದಾರೆ..? ಅವರ ಬೆಂಗಳೂರನ್ನ ಕಟ್ಟಿ ಬೆಳೆಸಿದ್ದಾರಾ..? ಇಲ್ಲ. ಆದರೂ ಬೆಂಗಳೂರಿನ ಒಂದು ರಸ್ತೆಗೆ ಅವರ ಹೆಸರನ್ನೇಕೆ ಇಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಶುರುವಾಗಿವೆ.
ಬೆಂಗಳೂರಿಗೆ ‘ದೊಡ್ಡ ಆಲಹಳ್ಳಿ ಕೆಂಪೇಗೌಡ’ ಅವರು ಯಾವುದೇ ಕೊಡುಗೆ ನೀಡಿಲ್ಲ ಸರಿ. ಹೋಗಲಿ ಕನಕಪುರ ಭಾಗದಲ್ಲಾದರೂ ಅವರು ಏನ್ನಾದರೂ ಮಾಡಿದ್ದಾರಾ ಎಂದರೇ ಅದೂ ಇಲ್ಲ. ಸ್ವತಃ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ ಹೇಳುವಾಗೇ ಅವರ ತಂದೆ ಕೆಂಪಣ್ಣ ಅವರು ಒಬ್ಬ ವ್ಯಾಪಾರಿ ಅಥವಾ ಮಧ್ಯವರ್ತಿ. ಹಳ್ಳಿಭಾಗಗಳಲ್ಲಿ ರೈತರು ಬೆಳೆದ ಕಡಲೆಯನ್ನು ಖರೀದಿಸಿ ಮಾರುತ್ತಿದ್ದವರು. 
ಅಲ್ಲಿಗೆ ‘ದೊಡ್ಡ ಆಲಹಳ್ಳಿ ಕೆಂಪೇಗೌಡ’ ಅವರು ರಾಜಧಾನಿಯ ಒಂದು ರಸ್ತೆಗೆ ಹೆಸರಿಡುವಷ್ಟು ದೊಡ್ಡ ಸಾಧನೆಯನ್ನಂತೂ ಮಾಡಿಲ್ಲ. ಹೀಗಿದ್ದರೂ ಅವರ ಹೆಸರನ್ನು ರಸ್ತೆಗೆ ಇಟ್ಟಿದ್ಯಾಕೆ..? ಕಾಂಗ್ರೆಸ್ ನಾಯಕರ ಕುಟುಂಬದವರು ಯಾವ ಸಾಧನೆಯನ್ನೂ ಮಾಡದಿದ್ದರೂ ರಸ್ತೆಗೆ ಅವರ ಹೆಸರಿಡಬಹುದಾ ಎಂಬ ಪ್ರಶ್ನೆಗೆ ಮೇಲ್ಸೇತುವೆಗೆ ವೀರ್ ಸಾವರ್ಕರ್ ಹೆಸರಿಡೋದನ್ನ ವಿರೋಧಿಸುತ್ತಿರುವ ಕಾಂಗ್ರೆಸ್ ನಾಯಕರೇ ಉತ್ತರಿಸಬೇಕು.
ಕಾಂಗ್ರೆಸ್ ನ ಬೌದ್ಧಿಕ ದಿವಾಳಿತನ, ಭಂಡತನಗಳಿಗೆ ಮಿತಿಯೇ ಇಲ್ಲ ; ಡಾ.ಕೆ ಸುಧಾಕರ್
ಇನ್ನು ಈ ವಿಚಾರವಾಗಿ ಸಚಿವ ಡಾ.ಕೆ ಸುಧಾಕರ್ ಅವರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಪಕ್ಷದ ಬೌದ್ಧಿಕ ದಿವಾಳಿತನ, ಭಂಡತನಗಳಿಗೆ ಮಿತಿಯೇ ಇಲ್ಲ. ಒಂದೆಡೆ ಮೇಲ್ಸೇತುವೆಗೆ ಸ್ವಾತಂತ್ರ‍್ಯವೀರ ಸಾವರ್ಕರ್ ಹೆಸರು ಬೇಡ ಎಂದು ವಿರೋಧಿಸುವವರು, ಯಾವ ಸೈದ್ಧಾಂತಿಕ ಕಾರಣಗಳಿಗಾಗಿ ರಸ್ತೆಯೊಂದಕ್ಕೆ ಇವರ ಹೆಸರನ್ನು ಇಟ್ಟರು, ಈಗ ಅದರ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ ಎನ್ನುವುದನ್ನಾದರೂ ಸ್ಪಷ್ಟಪಡಿಸಲಿ ಎಂದಿದ್ದಾರೆ.
ಸಚಿವರ ಈ ಟ್ವೀಟ್ ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದು, ಅದರಲ್ಲೋಬ್ಬರು “ಸರ್ ಇದು ನಮ್ಮ ಮನೆಯ ರಸ್ತೆ ..ಮೊದಲ ಹೆಸರು ಸುಭಾಷ್ ಭವನ ರಸ್ತೆ” ಎಂದಿದ್ದಾರೆ.
ಒಟ್ಟಾರೆ ರಾಜರಾಜೇಶ್ವರಿ ನಗರದಲ್ಲಿ ರಾರಾಜಿಸುತ್ತಿರುವ ಆ ಬೋರ್ಡ್ ಈಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಕಾಂಗ್ರೆಸ್ ನಾಯಕರೇ ಉತ್ತರಿಸಬೇಕು..








