ಹಾಸನ: ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವ ಸ್ಥಿತಿಯಲ್ಲಿದ್ದರೂ, ರಾಜಕೀಯ ವಿರೋಧಿಗಳು ತಮ್ಮ ಕುಟುಂಬವನ್ನು ಮತ್ತು ಪಕ್ಷವನ್ನು ಮುಗಿಸಲು ನಡೆಸುತ್ತಿರುವ ಸಂಚಿನ ವಿರುದ್ಧ ಕೊನೆಯ ಉಸಿರಿರುವವರೆಗೂ ಹೋರಾಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಗುಡುಗಿದ್ದಾರೆ. ಹಾಸನದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಅನಾರೋಗ್ಯದ ನಡುವೆಯೂ ರಾಜಕೀಯ ವೈರಿಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ನನ್ನ ಕಿಡ್ನಿ ಫೇಲ್ ಆಗಿದೆ, ಆದರೆ ಮನಸ್ಸು ಗಟ್ಟಿಯಾಗಿದೆ
ವೇದಿಕೆಯ ಮೇಲೆ ಅತ್ಯಂತ ಭಾವುಕರಾಗಿ ಮಾತನಾಡಿದ ದೊಡ್ಡಗೌಡರು, ನನ್ನ ಕಿಡ್ನಿಗಳು ವೈಫಲ್ಯ ಕಂಡಿವೆ. ವೈದ್ಯರ ಸಲಹೆಯಂತೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ದೈಹಿಕವಾಗಿ ನಾನು ಬಳಲಿದ್ದರೂ, ಈ ಮಣ್ಣಿನ ಮೇಲಿನ ಪ್ರೀತಿ ಮತ್ತು ನನ್ನ ಕುಟುಂಬವನ್ನು ರಾಜಕೀಯವಾಗಿ ನಿರ್ನಾಮ ಮಾಡಲು ಹೊಂಚು ಹಾಕಿರುವವರ ವಿರುದ್ಧ ಹೋರಾಡುವ ಛಲ ಇನ್ನೂ ನನ್ನಲ್ಲಿ ಮಾಸಿಲ್ಲ. ಎಲ್ಲಿಯವರೆಗೆ ನನ್ನ ದೇಹದಲ್ಲಿ ಪ್ರಾಣವಿರುತ್ತದೆಯೋ ಅಲ್ಲಿಯವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಘೋಷಿಸಿದರು.
ರೇವಣ್ಣ ಬಂಧನ ನೆನೆದು ಕಣ್ಣೀರಿಟ್ಟ ಗೌಡರು
ತಮ್ಮ ಪುತ್ರ ಎಚ್.ಡಿ. ರೇವಣ್ಣ ಅವರ ಬಂಧನದ ಪ್ರಸಂಗವನ್ನು ಪ್ರಸ್ತಾಪಿಸುವಾಗ ದೇವೇಗೌಡರು ಗದ್ಗದಿತರಾದರು. ನನ್ನ ಮನೆಯಲ್ಲೇ ರೇವಣ್ಣ ಕುಳಿತಿದ್ದಾಗ ಎಸ್ ಐಟಿ ಅಧಿಕಾರಿಗಳು ಬಂದು ಅವರನ್ನು ಬಂಧಿಸಿದರು. ಆ ದೃಶ್ಯ ಇಂದಿಗೂ ನನ್ನ ಕಣ್ಣಮುಂದಿದೆ. ರೇವಣ್ಣ ಮತ್ತು ಅವರ ಕುಟುಂಬವನ್ನು ಮುಗಿಸಲೆಂದೇ ಈ ಷಡ್ಯಂತ್ರ ರೂಪಿಸಲಾಗಿತ್ತು. ವಿಪರ್ಯಾಸವೆಂದರೆ, ಅಂದು ರೇವಣ್ಣ ಅವರನ್ನು ಬಂಧಿಸಿದ ಅಧಿಕಾರಿಗಳಿಗೆ ಇಂದು ರಾಜ್ಯ ಸರ್ಕಾರ ಬಡ್ತಿ ಮತ್ತು ಉಡುಗೊರೆಗಳನ್ನು ನೀಡಿ ಸನ್ಮಾನಿಸುತ್ತಿದೆ. ಈ ಮೂಲಕ ಸರ್ಕಾರ ದ್ವೇಷದ ರಾಜಕಾರಣವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ ಎಂಬುದು ಸಾಬೀತಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಬಿಜೆಪಿ ಬಿ ಟೀಂ ಟೀಕೆಗೆ ತಿರುಗೇಟು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹಿಂದೆ ಹಾಸನಕ್ಕೆ ಭೇಟಿ ನೀಡಿದ್ದಾಗ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಲೇವಡಿ ಮಾಡಿದ್ದರು. ಈ ಹೇಳಿಕೆಗೆ ಸಮಾವೇಶದಲ್ಲಿ ತಿರುಗೇಟು ನೀಡಿದ ದೇವೇಗೌಡರು, ಅಂದು ನಮ್ಮನ್ನು ಬಿ ಟೀಂ ಎಂದವರು ಇಂದು ಕಣ್ತೆರೆದು ನೋಡಲಿ. ನಾವಿಂದು ಎನ್ ಡಿಎ ಒಕ್ಕೂಟದ ಅವಿಭಾಜ್ಯ ಅಂಗವಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಂಡಿದ್ದಾರೆ. ನಮ್ಮದು ಅಧಿಕೃತ ಮೈತ್ರಿ, ಕದ್ದು ಮುಚ್ಚಿ ಮಾಡುವ ವ್ಯವಹಾರವಲ್ಲ ಎಂದು ಸ್ಪಷ್ಟಪಡಿಸಿದರು.
ಐಐಟಿ ಜಾಗ ಹೊಡೆದವರು ಯಾರು?
ನಾನು 1967ರಿಂದ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈ ಜಿಲ್ಲೆಗೆ ಡೈರಿ ತಂದೆವು, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದೆವು. ಪ್ರಧಾನಿಯಾಗಿದ್ದಾಗಲೂ ಕಪ್ಪುಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದೇನೆ. ಆದರೆ, ಕುಮಾರಸ್ವಾಮಿ ಅವರು 28 ವರ್ಷಗಳ ಹಿಂದೆ ಖರೀದಿಸಿದ ಜಮೀನನ್ನು ಗೋಮಾಳ ಎಂದು ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವವರು, ಈ ಹಿಂದೆ ಜಿಲ್ಲೆಗೆ ಮಂಜೂರಾಗಿದ್ದ ಐಐಟಿ ಜಾಗವನ್ನು ಯಾರು ಕಬಳಿಸಿದರು ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ಪರೋಕ್ಷವಾಗಿ ವಿರೋಧಿಗಳ ಬಣ್ಣ ಬಯಲು ಮಾಡಿದರು.
ಜನಸಾಗರವೇ ನನಗೆ ಶ್ರೀರಕ್ಷೆ
ಸಮಾವೇಶಕ್ಕೆ ಹರಿದುಬಂದ ಜನಸಾಗರವನ್ನು ಕಂಡು ಹರ್ಷ ವ್ಯಕ್ತಪಡಿಸಿದ ದೇವೇಗೌಡರು, ರಾಜ್ಯದ ಮೂಲೆ ಮೂಲೆಗಳಿಂದ ನೀವು ಬಂದಿರುವುದನ್ನು ನೋಡಿದರೆ ನನ್ನಲ್ಲಿ ಹೊಸ ಚೈತನ್ಯ ಮೂಡಿದೆ. ಕುಮಾರಣ್ಣ ಮತ್ತು ರೇವಣ್ಣ ಅವರ ಹಿಂದೆ ನಾವಿದ್ದೇವೆ ಎಂಬ ಸಂದೇಶವನ್ನು ನೀವು ಈ ಮೂಲಕ ಸಾರಿದ್ದೀರಿ. 1991ರಲ್ಲಿ ಇದೇ ಜನರು ನನ್ನನ್ನು ಸೋಲಿಸಿದ್ದರು, ನಂತರ ನನ್ನನ್ನು ಕೈಹಿಡಿದು ಮೇಲೆತ್ತಿದವರೂ ನೀವೇ. ನನ್ನನ್ನು ತುಳಿಯಲು ಯತ್ನಿಸಿದವರನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ನೀವು ನೀಡಿದ್ದೀರಿ. ನಾನು ಬದುಕಿರುವವರೆಗೂ ಈ ಜಿಲ್ಲೆಯ ಮತ್ತು ರಾಜ್ಯದ ಜನರ ಋಣ ತೀರಿಸಲು, ಪ್ರತಿ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಲು ಶ್ರಮಿಸುತ್ತೇನೆ ಎಂದು ಜನಸ್ತೋಮಕ್ಕೆ ತಲೆಬಾಗಿದರು.








