ದಾವಣಗೆರೆಯಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣ : ಸಚಿವ ಡಾ.ಕೆ.ಸುಧಾಕರ್
ದಾವಣಗೆರೆ : ದಾವಣಗೆರೆಯಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬ ಉದ್ದೇಶವಿದ್ದು, ಇದಕ್ಕಾಗಿ ಪರಿಶೀಲನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ದಾವಣಗೆರೆ ಜಿಲ್ಲಾ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಬೇಕೆಂಬ ಉದ್ದೇಶವಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಪಿಪಿಪಿ ಮಾದರಿಯಲ್ಲಿ ಆಸ್ಪತ್ರೆ ನಿರ್ಮಿಸುವ ಬಗ್ಗೆ ಚರ್ಚೆಯಾಗಿದೆ. 9 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸುವ ಉದ್ದೇಶವಿದೆ. ರಾಜ್ಯದಲ್ಲಿ 18 ಹಾಗೂ ಈಗ ಆರಂಭವಾಗುತ್ತಿರುವ ಹೊಸ ನಾಲ್ಕು ಮೆಡಿಕಲ್ ಕಾಲೇಜುಗಳು ಜಿಲ್ಲಾಕೇಂದ್ರಗಳಲ್ಲೇ ಇವೆ. ತಾಲೂಕು ಮಟ್ಟದಲ್ಲಿ ಕಾಲೇಜು ಇಲ್ಲ. ಈ ಬಗ್ಗೆ ಮನವಿ ಬಂದಿದ್ದು, ಪರಿಶೀಲಿಸಲಾಗುವುದು ಎಂದರು.
ರಾಜ್ಯದಲ್ಲಿ ಈವರೆಗೆ ಎರಡೂವರೆ ಕೋಟಿ ಲಸಿಕೆ ನೀಡಲಾಗಿದೆ. ಆಗಸ್ಟ್ ವೇಳೆಗೆ ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಲಸಿಕೆ ಬರಲಿದೆ. ಈ ಬಗ್ಗೆ ಕೇಂದ್ರದಿಂದ ಆಶ್ವಾಸನೆ ದೊರೆತಿದೆ. ರಾಜ್ಯದಲ್ಲಿ ಎರಡೂವರೆ ಕೋಟಿ ಹಾಗೂ ಕೇಂದ್ರ ಸರ್ಕಾರ 38 ಕೋಟಿ ಜನರಿಗೆ ಲಸಿಕೆ ನೀಡಿದೆ. ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ನೀಡಲಿದ್ದು, ಜೊತೆಗೆ ಜನಸಾಮಾನ್ಯರಿಗೂ ನೀಡಲಾಗುವುದು ಎಂದರು.
60-70% ಜನರು ಕೋವಿಡ್ ನ ಎರಡೂ ಲಸಿಕೆ ಪಡೆಯುವವರೆಗೆ ಜನರು ಎಚ್ಚರಿಕೆಯಿಂದಿರಬೇಕು. ಕೇರಳದಲ್ಲಿ 15 ಸಾವಿರವರೆಗೂ ಪ್ರಕರಣ ಕಂಡುಬರುತ್ತಿದೆ. ಮಹಾರಾಷ್ಟ್ರ, ಕೇರಳ ಗಡಿಗಳನ್ನು ಹಂಚಿಕೊಳ್ಳುವುದರಿಂದ ಅಲ್ಲಿ ಹೆಚ್ಚಾದಾಗ ರಾಜ್ಯದಲ್ಲೂ ಪ್ರಕರಣ ಏರುತ್ತದೆ. ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಉಂಟಾಗುತ್ತಿದ್ದು, ಇದಕ್ಕೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಸರ್ಕಾರ ಬಿಗಿ ಕ್ರಮ ಕೈಗೊಂಡಾಗ ವಿವಿಧ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. 10 ಲಕ್ಷ ಜನಸಂಖ್ಯೆಗೆ 50 ಕ್ಕಿಂತ ಹೆಚ್ಚು ಪ್ರಕರಣ ಕಂಡುಬರಬಾರದು. ಈಗಲೂ ರಾಜ್ಯದಲ್ಲಿ ಒಂದೂವರೆ ಲಕ್ಷ ಪರೀಕ್ಷೆ ಮಾಡಲಾಗುತ್ತಿದೆ ಎಂದರು.
ಕೋವಿಡ್ ಮೂರನೇ ಅಲೆ ಬರಲೇಬೇಕು ಎಂದೇನಿಲ್ಲ. ಮಕ್ಕಳಿಗೆ ಹೆಚ್ಚು ಸೋಂಕು ಬರಲೇಬೇಕು ಎಂದೇನಿಲ್ಲ. ನಾವು ಎಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತೇವೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ. ಮಕ್ಕಳಿಗೆ ಸೋಂಕು ಬಂದರೂ ತೀವ್ರ ಸಮಸ್ಯೆಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಆದರೂ ಮಕ್ಕಳ ಬಗ್ಗೆ ಹೆಚ್ಚು ನಿಗಾ ಇರಿಸಬೇಕು. ಮೂರನೇ ಅಲೆಗೆ ಸಿದ್ಧತೆಯಾಗಿ 23 ಸಾವಿರ ಕೋಟಿ ರೂ. ಖರ್ಚು ಮಾಡಲು ಪ್ರಧಾನಿಗಳು ತೀರ್ಮಾನಿಸಿದ್ದು, ರಾಜ್ಯಕ್ಕೆ ಒಂದೂವರೆ ಸಾವಿರ ಕೋಟಿ ರೂ. ಬರಲಿದೆ. ಪ್ರತಿ ಜಿಲ್ಲೆಯಲ್ಲಿ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಈ ಮೂಲಕ ಕ್ರಮ ವಹಿಸಲಾಗುವುದು ಎಂದರು.
ಹೊಸ ಸರ್ಕಾರಿ ಆಸ್ಪತ್ರೆ
ಚಿಗಟೇರಿ ಸಾರ್ವಜನಿಕ ಆಸ್ಪತ್ರೆ 1961 ರಲ್ಲಿ ಆರಂಭವಾಗಿದ್ದು, ಚಿಗಟೇರಿ ಕುಟುಂಬದವರು ಉಚಿತವಾಗಿ ಜಾಗ ನೀಡಿದ್ದರು. ಈ ಕಟ್ಟಡ ಹಳೆಯದಾಗಿದ್ದು, ಕೆಲ ದೂರುಗಳು ಬಂದಿವೆ. ವೈದ್ಯರು, ನರ್ಸ್, ಗ್ರೂಪ್ ಡಿ ನೌಕರರು ಕಡಿಮೆ ಇದ್ದಾರೆ. ಸಾವಿರ ಹಾಸಿಗೆಗಳ ಸಾಮರ್ಥ್ಯಕ್ಕನುಗುಣವಾಗಿ ಸಿಬ್ಬಂದಿ ಇಲ್ಲ. ಇಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಿಸಲು ಮುಖ್ಯಮಂತ್ರಿಗಳು ನಿರ್ಧರಿಸಿರುವುದರಿಂದ ಆವರಣದಲ್ಲಿ ಎಷ್ಟು ಜಮೀನಿದೆ, ಎಷ್ಟು ಸ್ಥಳ ಇದೆ ಎಂದು ವೀಕ್ಷಿಸಿದ್ದೇನೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಲು ಸೂಚಿಸಲಾಗಿದೆ. ಮುಂದಿನ ವಾರ ಸಭೆ ನಡೆಸಿ ಅಂತಿಮವಾಗಿ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. 29 ಎಕರೆ ಜಾಗ ಹಾಗೂ ಇನ್ನೊಂದು 6 ಎಕರೆ ಇದೆ. ಈ ಬಗ್ಗೆ ಸರ್ವೆ ನಡೆಸಿ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದರು.