ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಇದುವರೆಗೆ ಭಾರತದಲ್ಲಿ ಮೂವರಿಗೆ (ದೆಹಲಿಯಲ್ಲೊಂದು ಮತ್ತು ಜೈಪುರದಲ್ಲೊಂದು) ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕೊರೋನಾ ವೈರಸ್ ವ್ಯಾಪಿಸಿರುವ ದಕ್ಷಿಣ ಕೊರಿಯಾ, ಇಟಲಿ, ಇರಾನ್, ಸಿಂಗಾಪುರ ದೇಶಗಳಿಗೆ ಯಾರೂ ಅನಗತ್ಯ ಪ್ರವಾಸ ಕೈಗೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಕೊರೋನಾ ಬಗ್ಗೆ ಆತಂಕ ಬೇಡ, ಆದರೆ ರೋಗ ಲಕ್ಷಣಗಳ ಬಗ್ಗೆ ಎಚ್ಚರಿಕೆಯಿಂದಿರಿ. ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಎಂದು ಕೋರಿದ್ದಾರೆ.
ಅಲ್ಲದೆ ಆರೋಗ್ಯ ಸಚಿವಾಲಯದ 24X7 ನಿಯಂತ್ರಣ ಕೊಠಡಿಗೆ ಕರೆ ಮಾಡಿ ನಿಮ್ಮ ಸಂದೇಹ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಆರೋಗ್ಯ ಸಚಿವಾಲಯದ 24X7 ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ : 011-23978046
ಕೊರೋನಾ ವೈರಸ್ ಸೋಂಕಿನ ಲಕ್ಷಣಗಳು:
ಸಣ್ಣ ಪ್ರಮಾಣದ ಜ್ವರ ಮತ್ತು ಕೆಮ್ಮು. ಕೆಲವರಿಗೆ ಸುಸ್ತು, ತಲೆನೋವು, ಅತಿಸಾರ(ಭೇದಿ)
ಮುನ್ನೆಚ್ಚರಿಕೆ ಕ್ರಮಗಳು
1. ಆಗಾಗ ಕೈಗಳನ್ನು ತೊಳೆಯುವುದು
2. ಜ್ವರ ಪೀಡಿತರಿಂದ ಅಂತರ ಕಾಯ್ದುಕೊಳ್ಳುವುದು.
3. ಅನಾರೋಗ್ಯದ ಸಂದರ್ಭದಲ್ಲಿ ಮನೆಯಲ್ಲೇ ಉಳಿಯುವುದು.
4. ಸಣ್ಣ ಮಟ್ಟಿನ ಜ್ವರ ಕೆಮ್ಮು ಇದ್ದ ಸಂದರ್ಭದಲ್ಲಿ ಮಾಸ್ಕ್ ಬಳಸುವುದು. (ವಿಶೇಷವಾಗಿ ಸಿದ್ಧ ಪಡಿಸಲಾದ ಎನ್ 95 ಮಾಸ್ಕ್ ಗಳನ್ನು ಬಳಸಬಹುದು)
5. ಆಗಾಗ್ಗೆ ಬಾಯಿ ಮೂಗು ಕಣ್ಣು ಮುಟ್ಟಿಕೊಳ್ಳದಿರುವುದು.
6. ಸರಿಯಾಗಿ ಬೇಯಿಸಿ, ಸಿದ್ಧಪಡಿಸಿದ ಆಹಾರ ಸೇವನೆ
7. ಪದೇ ಪದೇ ಬಳಸುವ ವಸ್ತುಗಳನ್ನು ಶುಚಿಗೊಳಿಸಿ ಬಳಸುವುದು.
ಜಗತ್ತಿನಾದ್ಯಂತ ಭಯ ಹುಟ್ಟಿಸಿರುವ ಕೊರೋನಾ ವೈರಸ್ ಗೆ ಲಸಿಕೆ ಕಂಡುಹಿಡಿಯಲಾಗಿದ್ದು, ಅದನ್ನು ಬಳಸಬಹುದು ಎಂದು ಅಮೆರಿಕದ ಬಯೋ ಟೆಕ್ನಾಲಜಿ ಸಂಸ್ಥೆ ತಿಳಿಸಿದೆ.
ಇದಕ್ಕೆ mRNA-1273 ಎಂದು ಹೆಸರಿಡಲಾಗಿದ್ದು, ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಇನ್ಫೆಕ್ಷಿಯಸ್ ಡಿಸೀಸಸ್ ಗೆ ಕಳುಹಿಸಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯಯುತ ವ್ಯಕ್ತಿಗಳ ಮೇಲೆ ಪರೀಕ್ಷೆ ನಡೆಸಿ ಅದು ಯಶಸ್ವಿಯಾದರೆ ಮತ್ತಷ್ಟು ಪರೀಕ್ಷೆಗಳಿಗೆ ಒಳಪಡಿಸಲಾಗುವುದು ಎಂದು ಕಂಪನಿ ತಿಳಿಸಿದೆ.








