ಕಲುಷಿತ ನೀರು ಪೂರೈಕೆ – ಗ್ರಾಮದ 70ಕ್ಕೂ ಹೆಚ್ಚು ಮಂದಿಗೆ ವಾಂತಿ ಬೇದಿ…
ಕಲುಷಿತ ನೀರು ಸೇವಿಸಿ ಜನ ವಾಂತಿ ಬೇದಿಯಿಂದ ಬಳಲುತ್ತಿರುವ ಘಟನೆಗಳು ರಾಜ್ಯದಲ್ಲಿ ಮತ್ತೆ ಮತ್ತೆ ಘಟಿಸಿಸುತ್ತಿವೆ. ನಿನ್ನೆ ಸಹ ಕಲುಷಿತ ನೀರು ಸೇವಿಸಿ ಗ್ರಾಮದ 70ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾತಪೂರ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಲುಷಿತ ನೀರಿನ ಸೇವಿಸಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಗ್ರಾಮಸ್ಥರು ದಾಖಲಾಗಿದ್ದಾರೆ. ಇಂಡಿ ತಾಲೂಕಾ ಆಸ್ಪತ್ರೆಯಲ್ಲಿ 42 ಜನರು ಮತ್ತು ಇತರೆ ಖಾಸಗಿ ಆಸ್ಪತ್ರೆಗಳಲ್ಲಿಯೂ 30 ರಿಂದ 40 ಜನರು ದಾಖಲಾಗಿದ್ದಾರೆ.
ನಿನ್ನೆ ಬೆಳಿಗ್ಗೆಯಿಂದ ಸಾತಪೂರ ಗ್ರಾಮದ ಜನರಲ್ಲಿ ವಾಂತಿ ಬೇದಿ ಸಮಸ್ಯೆ ಕಾಣಿಸಿಕೊಂಡಿದೆ. ವಾಂತಿ ಬೇದಿ ಉಲ್ಬಣಗೊಂಡ ಕಾರಣ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂಡಿ ಪಟ್ಟಣದಿಂದ ಪೂರೈಕೆಯಾಗೋ ಕುಡಿಯೋ ನೀರಿನಿಂದ ಸಮಸ್ಯೆ ಉಂಟಾಗಿರೋ ಶಂಕೆ ವ್ಯಕ್ತವಾಗಿದೆ. ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ನೀರು ಪೂರೈಸಲಾಗುತ್ತಿದ್ದು,
ಗ್ರಾಮದಲ್ಲಿನ ನೀರನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ನೀರಿನ ಪರೀಕ್ಷಾ ವರದಿ ಬಂದ ಬಳಿಕ ಸಮಸ್ಯೆಗೆ ನಿಖರ ಕಾರಣ ತಿಳಿದು ಬರಲಿದೆ. ಇಂಡಿ ತಾಲೂಕಾ ಆಸ್ಪತ್ರೆಗೆ ಸ್ಥಳಿಯ ಶಾಸಕ ಯಶವಂತರಾಯಗೌಡ ಪಾಟೀಲ್ ಭೇಟಿ ನೀಡಿ ವಾಂತಿ ಬೇಧಿಯಿಂದ ಬಳಲುತ್ತಿರುವ ಗ್ರಾಮಸ್ಥರಿಗೆ ದೈರ್ಯ ಹೇಳಿದ್ದಾರೆ.








