ಬೆಂಗಳೂರು: ದೇಶದಲ್ಲಿ ಕೊರೊನಾ ಅಬ್ಬರ 3 ಲಕ್ಷದ ಗಡಿ ದಾಟಿದ ಬೆನ್ನಲ್ಲೇ, ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸ್ಪೋಟ ಮುಂದುವರೆದಿದೆ. ಇಂದು 308 ಮಂದಿಗೆ ಕೊರೊನಾ ವಕ್ಕರಿಸಿದ್ದು, ಮೂವರನ್ನು ಬಲಿಪಡೆದಿದೆ.
ಬೆಂಗಳೂರು ನಗರದಲ್ಲಿ 31 ಮಂದಿಗೆ ಕೊರೊನಾ ಸೋಂಕು ತಗುಲಿದ್ದರೆ, ಕಲಬುರಗಿಯಲ್ಲಿ 67 ಮಂದಿಗೆ ಮಹಾಮಾರಿ ದೇಹ ಪ್ರವೇಶ ಮಾಡಿದೆ. ಯಾದಗಿರಿಯಲ್ಲಿ 52, ಬೀದರ್ 42, ದಕ್ಷಿಣ ಕನ್ನಡ 30, ಧಾರವಾಡ 20, ಉಡುಪಿ 14, ಹಾಸನ 11, ಬಳ್ಳಾರಿ 11, ವಿಜಯಪುರದಲ್ಲಿ 6ಮಂದಿಗೆ ಕೊರೊನಾ ತಗುಲಿದೆ.
ಬೆಂಗಳೂರಿನಲ್ಲಿ ಕೊರೊನಾ ಮರಣ ಮೃದಂಗ ಮಂದುವರೆದಿದ್ದು, 23 ವರ್ಷದ ಯುವಕ ಹಾಗೂ 62 ವರ್ಷದ ವೃದ್ಧ ಬಲಿಯಾಗಿದ್ದಾರೆ.
ಧಾರವಾಡಲ್ಲಿ ಇಂದು ಮತ್ತೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಿಂದ ಹಿಂದಿರುಗಿದ್ದ 70 ವರ್ಷದ ವೃದ್ಧರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6824ಕ್ಕೆ ಏರಿಕೆಯಾಗಿದ್ದು, ಇಂದು 206 ಮಂದಿ ಡಿಶ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಕೊರೊನಾ ಪಾಸಿಟಿವ್ ಆಗಿದ್ದ 3648 ಮಂದಿ ಗುಣಮುಖರಾಗಿ ಮನೆಗಳಿಗೆ ವಾಪಸ್ಸಾಗಿದ್ದಾರೆ.








