ಜಮ್ಮು ಕಾಶ್ಮೀರದ ಆವಂತಿಪುರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ನಡೆದ ಜಂಟಿ ಕಾರ್ಯಚರಣೆಯಲ್ಲಿ ಹಿಜ್ಬುಲ್ನ ಓರ್ವ ಉಗ್ರನನ್ನು ಎನ್ಕೌಂಟರ್ ನಲ್ಲಿ ಸದೆ ಬಡಿಯಲಾಗಿದೆ. ಆವಂತಿಪುರದಲ್ಲಿ ಭಾರತೀಯ ಸೇನೆ, ಸಿಆರ್ಪಿಎಫ್ ಸಿಬ್ಬಂದಿಗಳು ಮತ್ತು ಜಮ್ಮು ಕಾಶ್ಮೀರದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಓರ್ವ ಉಗ್ರನನ್ನು ಎನ್ಕೌಂಟರ್ ಮಾಡಲಾಗಿದೆ. ಎನ್ಕೌಂಟರ್ ನಲ್ಲಿ ಹತನಾದ ಉಗ್ರನನ್ನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನಾಯ್ಕು ಎಂದು ಗುರುತಿಸಲಾಗಿದೆ.
ಇನ್ನಷ್ಟು ಉಗ್ರರು ಪುಲ್ವಾಮಾದ ಶರ್ಸಾಲಿ ಗ್ರಾಮದಲ್ಲಿ ಅಡಗಿರುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಸೇನಾ ಪಡೆ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಗ್ರಾಮದ ಸುತ್ತಮುತ್ತಲಿನ 12 ರಿಂದ 15 ಮನೆಗಳ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರನನ್ನು ಸದೆಬಡಿದ ಜಾಗದಲ್ಲಿ ಒಂದು ಎಕೆ-56 ರೈಫಲ್ ಸಿಕ್ಕಿದ್ದು ಅದನ್ನು ವಶಕ್ಕೆ ಪಡೆಯಲಾಗಿದೆ.ಇಂದು ಮುಂಜಾನೆಯ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ಸೇನಾಪಡೆ ಕೂಡ ಪ್ರತಿದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಗುಂಡೇಟಿಗೆ ಉಗ್ರ ಸಾವನ್ನಪ್ಪಿದ್ದಾನೆ.
ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ 2 ದಿನಗಳ ಹಿಂದೆ ಉಗ್ರರು ನಡೆಸಿದ್ದ ದಾಳಿಯಲ್ಲಿ ಮೂವರು ಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಭಾನುವಾರ ಹಂದ್ವಾರದಲ್ಲಿ ನಡೆದ ದಾಳಿಯಲ್ಲಿ ಐವರು ಭದ್ರತಾ ಪಡೆಯ ಸಿಬ್ಬಂದಿಗಳು ಉಗ್ರರ ಗುಂಡೇಟಿಗೆ ಹುತಾತ್ಮರಾಗಿದ್ದರು.








