ಕೊಪ್ಪಳ: ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಅವಾಂತರಗಳು ಮುಂದುವರೆದಿದ್ದು, ಮನೆಗಳಿಗೆ ನೀರು ನುಗ್ಗಿದ್ದರೆ, ನೀರಿನ ರಭಸಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್(collapse bridge cum barraige) ಕೊಚ್ಚಿಹೋಗಿದೆ.
ಕೊಪ್ಪಳ ತಾಲೂಕಿನ ಮಂಗಳಾಪುರ ಸೇರಿದಂತೆ ತಗ್ಗು ಪ್ರದೇಶದ ಕೆಲ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಧವಸ-ಧಾನ್ಯ, ಬಟ್ಟೆ, ಆಹಾರ ಪದಾರ್ಥ ನೀರುಪಾಲಾಗಿವೆ. ಮಳೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಜನರು ರಾತ್ರಿಯಿಡಿ ನಿದ್ದೆಗೆಟ್ಟು ಜಾಗರಣೆ ಮಾಡಿದ್ದಾರೆ.
ಶನಿವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯ ಬಹುತೇಕ ಹಳ್ಳಿಯ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಿರೇಹಳ್ಳ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ನೀರು ರಭಸವಾಗಿ ಹರಿಯುತ್ತಿದೆ. ಪರಿಣಾಮ ಕೋಳೂರು ಬಳಿಯ ಹಿರೇಹಳ್ಳಕ್ಕೆ ನಿರ್ಮಿಸಲಾಗಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕೊಚ್ಚಿ ಹೋಗಿದ್ದು ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಗದಗ್‍ನಲ್ಲಿ ಮನೆಯಲ್ಲಿ ಜಿನಗುಡುತ್ತಿರುವ ನೀರು..1


ಗದಗ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಮನೆಗಳಲ್ಲಿ ನೀರು ಜಿನುಗುಡುತ್ತಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಸುಮಾರು 20 ಕ್ಕೂ ಹೆಚ್ಚು ಮನೆಗಳಲ್ಲಿ ನೀರು ಶೇಖರಣೆಯಾಗಿದ್ದು ಕುಸಿದು ಬೀಳುವ ಅಪಾಯದಲ್ಲಿ ಜನರಿದ್ದಾರೆ. ಪಂಪಸೆಟ್ ಮೂಲಕ ನೀರು ಹೊರಗಡೆ ಹಾಕುತ್ತಿದ್ದು, ಮನೆಯಲ್ಲಿನ ಧವಸ ಧಾನ್ಯಗಳು ಹಾಗೂ ವಸ್ತುಗಳು ನೀರಿಗೆ ಆಹುತಿಯಾಗಿವೆ.
ಧಾರವಾಡದಲ್ಲಿ ಸರ್ಕಾರಿ ಬಸ್ ಚಾಲಕನ ಹುಚ್ಚು ಸಾಹಸ..!
ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಇನಾಮಹೊಂಗಲ ಮತ್ತು ಹಾರೋಬೆಳವಡಿ ಗ್ರಾಮದ ಮಧ್ಯೆ ಇರುವ ಸೇತುವೆ ಮೇಲೆ ನೀರು ಹರಿಯುತ್ತಿದೆ. ಧಾರವಾಡ_ಸವದತ್ತಿ ರಾಜ್ಯ ಹೆದ್ದಾರಿಯಲ್ಲಿರುವ ಸೇತುವೆಯಲ್ಲಿ ನೀರಿನ ರಭಸಕ್ಕೆ ಅದರ ಮೇಲಿನ ಡಾಂಬರು ಕಿತ್ತುಹೋಗಿ ಗುಂಡಿಗಳಾಗಿವೆ. ಗುಂಡಿಗಳು ಹಾಗೂ ಹರಿಯುತ್ತಿರುವ ನೀರಿನ ಮಧ್ಯೆ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಬಸ್ಸನ್ನು ಚಾಲನೆಗೆ ಮುಂದಾಗಿದ್ದಾರೆ.

ಬಸ್ ಪಲ್ಟಿ ಹೊಡೆದು ನದಿಗೆ ಉರುಳಿ ಬಿಟ್ಟಿತು ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ನಿಂತಿದ್ದರು. ಆದರೆ ಧೈರ್ಯದಿಂದ ಬಸ್ ಚಾಲನೆ ಮಾಡಿ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.








