ನವದೆಹಲಿ : ರಾಜ್ಯದ ಸಿಎಂ (Karnataka CM) ಗುದ್ದಾಟ ಅಂತ್ಯವಾಗಿದ್ದು, 5ನೇ ದಿನಕ್ಕೆ ಸಿಎಂ ಬಿಕ್ಕಟ್ಟು ಪೂರ್ಣಗೊಂಡಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮನವೊಲಿಕೆಯ ನಂತರ ಸಿದ್ದರಾಮಯ್ಯ (Siddaramaiah) ಸಿಎಂ ಆಗಲು ಡಿ.ಕೆ. ಶಿವಕುಮಾರ್ (DK Shivakumar) ಒಪ್ಪಿಗೆ ನೀಡಿದ್ದಾರೆ.
ಬುಧವಾರ ಪೂರ್ತಿ ಡಿಕೆಶಿ ಜೊತೆ ಮಾತುಕತೆ ನಡೆಸಿದರೂ ಯಾವುದೇ ಕಾರಣಕ್ಕೂ ಬೇಡಿಕೆಯಿಂದ ಹಿಂದಕ್ಕೆ ಸರಿದಿರಲಿಲ್ಲ. ತಡರಾತ್ರಿ ಶಿಮ್ಲಾದಲ್ಲಿರುವ ಸೋನಿಯಾ ಗಾಂಧಿ (Sonia Gandhi) ದೂರವಾಣಿ ಮೂಲಕವೇ ಡಿಕೆಶಿ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಲಿದ್ದು, ಎರಡನೇ ಅವಧಿಗೆ ಡಿ.ಕೆ. ಶಿವಕುಮಾರ್ ಸಿಎಂ ಪಟ್ಟಕ್ಕೆ ಏರಲಿದ್ದಾರೆ. ಡಿಕೆ ಶಿವಕುಮಾರ್ ಡಿಸಿಎಂ, ಎರಡು ಪ್ರಬಲ ಖಾತೆಯನ್ನು ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ. ಲೋಕಸಭಾ ಚುನಾವಣೆ ಮುಗಿಯುವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಸಿಎಂ ಆಯ್ಕೆ ಹಿನ್ನೆಲೆಯಲ್ಲಿ ಇಂದು ಸಂಜೆ 7 ಗಂಟೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಿಎಂ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತಿದೆ.