ಡೆಹ್ರಾಡೂನ್ : ಹೆಲ್ಮೆಟ್ ಹಾಕಿಲ್ಲ ಎಂದು ಬೈಕ್ ಸವಾರನ ಹಣೆಗೆ ಪೊಲೀಸರು ‘ಕೀ’ ಇರಿದ ಘಟನೆ ಉತ್ತರಾಖಂಡ್ ನ ರುದ್ರಾಪುರದಲ್ಲಿ ನಡೆದಿದೆ. ನಿನ್ನೆ ತಡ ರಾತ್ರಿ ಈ ಘಟನೆ ನಡೆದಿದ್ದು, ಪೆಟ್ರೋಲ್ ತುಂಬಿಸಿಕೊಳ್ಳಲು ಸ್ನೇಹಿತನೊಟ್ಟಿಗೆ ಹೋಗಿದ್ದ ಯುವಕನನ್ನು ಗಸ್ತು ಪಡೆಯ ಮೂವರು ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಸಿಬ್ಬಂದಿ ಹೆಲ್ಮೆಟ್ ಹಾಕಿಲ್ಲ ಯಾಕೆ ಎಂದು ಯುವಕನನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪೊಲೀಸರು ಯುವಕನ ಬೈಕ್ ಬೀಗದ ಕೈಯನ್ನ ಕಸಿದು ಆತನ ಹಣೆಗೆ ಇರಿದುಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊನೆಗೆ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೂವರು ಪೊಲೀಸರನ್ನ ಅಮಾನತು ಮಾಡಲಾಗಿದೆ.








