ಮೈಸೂರಿನ ಅಂಬಾ ವಿಲಾಸ ಅರಮನೆ ಅವರಣಕ್ಕೂ ಕಾಲಿಟ್ಟ ಕೊರೊನಾ – ಮೂರು ದಿನ ಅರಮನೆ ಬಂದ್
ಮೈಸೂರು, ಜುಲೈ 10: ವಿಶ್ವವನ್ನೇ ಕಾಡಿರುವ ಕೋವಿಡ್-19 ಸೋಂಕು ಇದೀಗ ವಿಶ್ವ ವಿಖ್ಯಾತ ಅಂಬಾ ವಿಲಾಸ ಅರಮನೆ ಆವರಣಕ್ಕೆ ಕಾಲಿರಿಸಿದೆ. ಅರಮನೆ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಂಪತಿಯ ಪುತ್ರನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅರಮನೆ ಬಂದ್ ಆಗಲಿದೆ.
ಅಂಬಾ ವಿಲಾಸ ಅರಮನೆ ಆವರಣದಲ್ಲಿ ಒಂಟೆಗಳ ಪಾಲನೆ ಮಾಡುವ ಸಿದ್ದಯ್ಯ ಅವರ ಪುತ್ರನಿಗೆ ಕೊರೊನಾ ಸೋಂಕು ಇರುವುದು ದೃಢ ಪಟ್ಟಿದ್ದು, ಮೂರು ದಿನಗಳ ಕಾಲ ಮಹಾರಾಣಿಯವರ ವಾಸ ಸ್ಥಳ ಸೇರಿದಂತೆ ಇಡೀ ಅರಮನೆ ಆವರಣದಲ್ಲಿ ಸ್ಯಾನಿಟೈಸ್ ಮಾಡುವ ಕೆಲಸ ನಡೆಯಲಿದೆ.
ಕೆಲ ದಿನಗಳ ಹಿಂದೆ ಸಿದ್ದಯ್ಯ ಅವರ ಪುತ್ರ ಅನಾರೋಗ್ಯ ಪೀಡಿತನಾಗಿದ್ದ ಹಿನ್ನಲೆಯಲ್ಲಿ ಆತನನ್ನು ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ವರದಿಯಲ್ಲಿ ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಸಿದ್ದಯ್ಯ ದಂಪತಿಗಳು ಪುತ್ರನೊಂದಿಗೆ ಅರಮನೆ ಆವರಣದಲ್ಲಿ ತಮಗೆ ನೀಡಿರುವ ಕ್ವಾಟ್ರಸ್‌ನಲ್ಲಿ ವಾಸವಾಗಿದ್ದಾರೆ. ಸಿದ್ದಯ್ಯ ಅವರ ಪತ್ನಿ ಮಹಾರಾಣಿಯವರ ಖಾಸಗಿ ಅರಮನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಈಗ ಅವರ ಪುತ್ರನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅರಮನೆಯನ್ನು ಬಂದ್ ಗೊಳಿಸಲಾಗುತ್ತಿದೆ. ಈ ಅವಧಿಯಲ್ಲಿ ಸಿದ್ದಯ್ಯ ಅವರು ವಾಸವಿರುವ ಕ್ವಾಟ್ರಸ್, ಮಹಾರಾಣಿ ಖಾಸಗಿ ಅರಮನೆ ಸೇರಿದಂತೆ ಇಡೀ ಅರಮನೆ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುವುದು ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ತಿಳಿಸಿದ್ದಾರೆ.








