ಮಂಗಳೂರು, ಮೇ 18: ಕೊರೋನಾ ಸೋಂಕು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದ್ದು, ಸೋಮವಾರ ದಕ್ಷಿಣ ಕನ್ನಡದಲ್ಲಿ ಇಬ್ಬರಿಗೆ ಮತ್ತು ಉಡುಪಿಯಲ್ಲಿ 7 ತಿಂಗಳ ಗರ್ಭಿಣಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರೆಂಟೈನ್ ನಲ್ಲಿದ್ದ 30 ವರ್ಷದ ವ್ಯಕ್ತಿ ಮತ್ತು ಮಂಗಳೂರಿನ ಯೆಯ್ಯಾಡಿ ನಿವಾಸಿಯಾಗಿರುವ 55 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ತೀವ್ರ ಉಸಿರಾಟದ ತೊಂದರೆ (SARI) ಮತ್ತು ಜ್ವರದಿಂದ ಬಳಲುತ್ತಿದ್ದ ಯೆಯ್ಯಾಡಿಯ ಮಹಿಳೆ ತಪಾಸಣೆಗೆಂದು ಕೋವಿಡ್ ಆಸ್ಪತ್ರೆಗೆ ಬಂದಿದ್ದು, ಪರೀಕ್ಷೆಯಲ್ಲಿ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದವರಾದ 30 ವರ್ಷದ ವ್ಯಕ್ತಿ ಮಹಾರಾಷ್ಟ್ರದ ರಾಯಗಡದಿಂದ ಆಗಮಿಸಿ ಕ್ವಾರಂಟೈನ್ ಗೆ ಒಳಪಟ್ಟಿದ್ದರು.
ಉಡುಪಿಯ ಕೊಲ್ಲೂರಿನ 28 ವರ್ಷದ ಗರ್ಭಿಣಿ ಮಹಿಳೆಯಲ್ಲೂ ಕೊರೊನಾ ಸೋಂಕು ಪತ್ತೆಯಾಗಿದ್ದು, ಆಕೆಯ ಪತಿಯನ್ನು ಐಸೋಲೇಶನ್ ಗೆ ಒಳಪಡಿಸಿದ್ದು, ಇವರು ಮಹಾರಾಷ್ಟ್ರದ ಮುಂಬೈ ನಿಂದ ಆಗಮಿಸಿ ಕ್ವಾರಂಟೈನ್ ನಲ್ಲಿ ಇದ್ದರು.
ಕೊಡಗು ಜಿಲ್ಲೆಗೆ ಮುಂಬೈನಿಂದ ಆಗಮಿಸಿದ್ದ 45 ವರ್ಷದ ಮಡಿಕೇರಿ ತಾಲೂಕಿನ ಮಹಿಳೆಯಲ್ಲೂ ಕೊರೊನಾ ಸೋಂಕು ಪತ್ತೆಯಾಗಿದೆ. ಇವರು ಮುಂಬೈನಲ್ಲಿ ಹೋಂ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.