ರಿಯೋ ಡಿ ಜನೈರೋ, ಮೇ 23 : ದಕ್ಷಿಣ ಅಮೇರಿಕಾದ ಬ್ರೆಜಿಲ್ ನಲ್ಲಿ ಕೊರೋನಾ ವೈರಸ್ ಸೋಂಕಿನ ಅಟ್ಟಹಾಸ ಮುಂದುವರಿದಿದೆ. ಚೀನಾದ ವುಹಾನ್ ನಿಂದ ಪ್ರಾರಂಭವಾದ ಕೊರೊನಾ ವೈರಸ್ ನ ಸವಾರಿ ಇಟಲಿ, ಸ್ಪೇನ್, ಯು.ಕೆ., ಫ್ರಾನ್ಸ್, ಅಮೆರಿಕದಂತಹ ಬಲಿಷ್ಟ ರಾಷ್ಟ್ರಗಳನ್ನೇ ಕಂಗೆಡಿಸಿ ವಿಶ್ವದಾದ್ಯಂತ ಬಹುತೇಕ ರಾಷ್ಟ್ರಗಳಲ್ಲೂ ಮರಣ ಮೃದಂಗ ಬಾರಿಸಿತು. ಇದೀಗ ಕೊರೋನಾ ವೈರಸ್ ನ ಹೊಸ ಕೇಂದ್ರ ದಕ್ಷಿಣ ಅಮೆರಿಕದ ಬ್ರೆಜಿಲ್ ಆಗಿದ್ದು, ಕೊರೊನಾ ಸೋಂಕು ಪ್ರಕರಣಗಳು ಸಂಖ್ಯೆ ಏರುಗತಿಯಲ್ಲಿ ಹೆಚ್ಚಾಗುತ್ತಿದೆ.
ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆ ದಕ್ಷಿಣ ಅಮೇರಿಕಾ ಮಹಾಮಾರಿ ಕೋವಿಡ್-19 ನ ಹೊಸ ಕೇಂದ್ರಬಿಂದು ಎಂದು ಘೋಷಿಸಿದೆ. ಇಲ್ಲಿಯವರೆಗೆ ಬ್ರೆಜಿಲ್ ನಲ್ಲಿ 3,32,383 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ರಷ್ಯಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಅತಿ ಹೆಚ್ಚಿನ ಕೊರೊನಾ ವೈರಸ್ ಸೋಂಕಿತರಿರುವ ಎರಡನೇ ರಾಷ್ಟ್ರ ಎಂದು ಗುರುತಿಸಿಕೊಂಡಿದೆ. ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರಿರುವುದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ.
ದಕ್ಷಿಣ ಅಮೆರಿಕದ ಬ್ರೆಜಿಲ್ ನಲ್ಲಿ ಕೊರೊನಾ ಸೋಂಕು ಪ್ರಕರಣ ಮತ್ತು ಸಾವಿನ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕೇವಲ 11 ದಿನಗಳಲ್ಲಿ ಸಾವಿನ ಪ್ರಮಾಣ ದುಪ್ಪಟ್ಟಾಗಿದೆ. ಇಲ್ಲಿಯವರೆಗೆ 21,048 ಮಂದಿ ಕೊರೊನಾದಿಂದ ಮರಣ ಹೊಂದಿದ್ದರೆ, ಮೇ 22 ರಂದು ಒಂದೇ ದಿನದಲ್ಲಿ 1,001 ಮಂದಿ ಸಾವನ್ನಪ್ಪಿದ್ದಾರೆ.
ಅಮೆರಿಕದ ವಾಷಿಂಗ್ಟನ್‍ನ ಜಾನ್ಸ್ ಹಾಪ್‍ಕಿನ್ಸ್ ಯೂನಿವರ್ಸಿಟಿಯ ಅಂಕಿ ಅಂಶಗಳ ಪ್ರಕಾರ ಲ್ಯಾಟಿನ್ ಆಮೆರಿಕ ದೇಶದಲ್ಲಿ ಇಲ್ಲಿಯವರೆಗೆ ಸುಮಾರು 3,30,890 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 21,000ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಬ್ರೆಜಿಲ್ ನಲ್ಲಿ ಪ್ರತಿದಿನ ಕೊರೋನಾ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಬಹುತೇಕ ಎಲ್ಲ ನಗರಗಳು ಮತ್ತು ಪಟ್ಟಣಗಳು ಕೊರೋನಾ ವೈರಸ್ ದಾಳಿಯಿಂದ ಬಾಧಿತವಾಗಿವೆ.
ಬ್ರೆಜಿಲ್ ಆರೋಗ್ಯ ಸಚಿವಾಲಯ ಕೊರೊನಾ ವೈರಸ್ ಚಿಕಿತ್ಸೆಗೆ ಮಲೇರಿಯಾಕ್ಕೆ ಬಳಸುವ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ನನ್ನು ಶಿಫಾರಸ್ಸು ಮಾಡಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾ ವೈರಸ್ ಸೋಂಕಿಗೆ ಪರಿಣಾಮಕಾರಿ ಎಂಬ ಯಾವ ಪುರಾವೆ ಇಲ್ಲದಿದ್ದರೂ, ಚಿಕಿತ್ಸೆಗೆ ಅದನ್ನೇ ಬಳಸಲಾಗುತ್ತಿದೆ. ಆದರೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗಳನ್ನು ನೀಡದವರೊಂದಿಗೆ ಹೋಲಿಸಿದಾಗ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇವಿಸಿದವರಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವೊಂದು ತಿಳಿಸಿದೆ. ಪ್ಯಾನ್ ಅಮೇರಿಕನ್ ಹೆಲ್ತ್ ಸಂಸ್ಥೆ ನಡೆಸಿದ ಕ್ಲಿನಿಕಲ್ ಪ್ರಯೋಗಗಳ ಪ್ರಕಾರ, ಕೊರೊನಾ ವೈರಸ್ ಸೋಂಕಿನ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಪರಿಣಾಮಕಾರಿ ಫಲಿತಾಂಶ ನೀಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೈಕ್ ರೀಯಾನ್ ತಿಳಿಸಿದ್ದಾರೆ.








