ಇಸ್ಲಾಮಾಬಾದ್, ಜೂನ್ 1 : ವಿಶ್ವದಾದ್ಯಂತ ಕೊರೊನಾ ಪ್ರಕರಣಗಳು ಸಂಖ್ಯೆ ಏರಿಕೆ ಕಂಡಿದ್ದು, ದಿನ ಕಳೆದಂತೆ ಪ್ರಕರಣಗಳು ಮತ್ತಷ್ಟು ಹೆಚ್ಚುತ್ತಲೇ ಇದೆ. ಪಾಕಿಸ್ತಾನದಲ್ಲೂ ಕೊರೊನಾ ಸೋಂಕಿನ ಪ್ರಕರಣಗಳು ತೀವ್ರ ಗತಿಯಲ್ಲಿ ಏರಿಕೆ ಕಾಣುತ್ತಿದ್ದು, 69 ಸಾವಿರದ ಗಡಿ ದಾಟಿದೆ. ಪ್ರತಿದಿನ ವಿವಿಧ ಪ್ರಾಂತ್ಯಗಳಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಸುಮಾರು 3 ಸಾವಿರ ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಪಾಕಿಸ್ತಾನದಲ್ಲಿ ಇಲ್ಲಿಯವರೆಗೆ 1, 483 ಮಂದಿ ಕೊರೊನಾದಿಂದ ಮರಣ ಹೊಂದಿದ್ದಾರೆ.
ಈ ನಡುವೆ ಕರಾಚಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಯೊಬ್ಬನ ಶವವನ್ನು ಪಡೆಯುವುದಕ್ಕೆ ಸಂಬಂಧಿಸಿದಂತೆ ಆತನ ಸಂಬಂಧಿಕರು ದಾಂಧಲೆ ನಡೆಸಿದ್ದಾರೆ. ಕರಾಚಿಯ ಡಾ|ರುತ್ ಪಾವ್ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ತಮಗೆ ಒಪ್ಪಿಸಬೇಕು ಎಂದು ಆತನ ಸಂಬಂಧಿಕರು ದಾಂಧಲೆ ನಡೆಸಿದ್ದು, ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಶುಕ್ರವಾರ ಬೆಳಗಿನ ಜಾವ 2.15ರ ಸಮಯದಲ್ಲಿ ಆರೋಗ್ಯ ಹದಗೆಟ್ಟ ವ್ಯಕ್ತಿಯನ್ನು ಆತನ ಸಂಬಂಧಿಕರು ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆತ ಶನಿವಾರ ಮೃತಪಟ್ಟಿದ್ದ. ಚಿಕಿತ್ಸೆ ನೀಡುವಾಗ ಆತನಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಆತನಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಆದರೆ ಆತನ ಸಂಬಂಧಿಕರು ಇದನ್ನು ನಿರಾಕರಿಸಿದ್ದು, ಆತನ ಆರೋಗ್ಯ ಸಾಮಾನ್ಯವಾಗಿದ್ದು ಸರಿಯಾಗಿ ಚಿಕಿತ್ಸೆ ನೀಡದೆ ವೈದ್ಯರ ನಿರ್ಲಕ್ಷ್ಯ ದಿಂದ ಆತ ಸಾವನ್ನಪ್ಪಿದ್ದಾನೆ. ಇದೀಗ ಕೊರೊನಾ ಸೋಂಕು ಎಂದು ದಾರಿ ತಪ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮೃತಪಟ್ಟ ವ್ಯಕ್ತಿಯ ಸುಮಾರು70 ಮಂದಿ ಸಂಬಂಧಿಕರು ಆಸ್ಪತ್ರೆಯ ಮುಂದೆ ಜಮಾಯಿಸಿ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಮೃತದೇಹವನ್ನು ಕೊಂಡೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.








