ದೆಹಲಿಯಲ್ಲಿ ಕೊರೊನಾ ಪ್ರಕರಣ ತೀವ್ರ ಏರಿಕೆ- ಪ್ರತಿ ಮನೆಗಳಲ್ಲೂ ಕೊರೊನಾ ಟೆಸ್ಟ್ ಗೆ ನಿರ್ಧಾರ
ಹೊಸದಿಲ್ಲಿ, ಜೂನ್ 25: ಕೊರೋನವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ ಮತ್ತೆ ತೀವ್ರ ಏರಿಕೆ ಕಂಡಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 457,656 ಕ್ಕೆ ಏರಿದೆ. ಕೋವಿಡ್ -19 ನಿಂದ ದೇಶದಲ್ಲಿ ಈವರೆಗೆ ಸುಮಾರು 14,505 ಜನರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳು 66,000 ದಾಟಿದ್ದು, ಒಂದೇ ದಿನ 3,947 ಹೊಸ ಸೋಂಕು ಪ್ರಕರಣಗಳು ಮಂಗಳವಾರ ವರದಿಯಾಗಿದೆ. ಅಷ್ಟೇ ಅಲ್ಲ ನಗರದಲ್ಲಿ ಸಾವಿನ ಸಂಖ್ಯೆ 2,301 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನವೈರಸ್ ಒಂದೇ ದಿನದಲ್ಲಿ 3,214 ಮಂದಿಯಲ್ಲಿ ಪತ್ತೆಯಾಗಿದ್ದು ಇದರೊಂದಿಗೆ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 139,010 ಕ್ಕೆ ತಲುಪಿದೆ ಮತ್ತು 248 ಕೋವಿಡ್ -19 ಸಾವುಗಳು ಸಾವಿನ ಸಂಖ್ಯೆಯನ್ನು 6,531 ಕ್ಕೆ ಏರಿಸಿದೆ.

ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಕೇಂದ್ರದ ಜೊತೆಗೆ ಮಾತುಕತೆ ನಡೆಸಿ ಮುಂಬರುವ ಜುಲೈ 6ರ ಒಳಗೆ ದೆಹಲಿಯಲ್ಲಿ ಪ್ರತಿ ಮನೆಗಳಲ್ಲೂ ಕೊರೊನಾ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬಂದಿದೆ. ದೆಹಲಿಯ ಎಲ್ಲ ಕಂಟೈನ್ಮೆಂಟ್ ಜೋನ್ಗಳಲ್ಲಿರುವ ಪ್ರತಿಯೊಂದು ಮನೆಗಳಲ್ಲೂ ಈ ತಿಂಗಳ ಅಂತ್ಯದೊಳಗೆ ಕೊರೊನಾ ಪರೀಕ್ಷೆ ನಡೆಸಲು ದೆಹಲಿ ಸರ್ಕಾರ ಚಿಂತನೆ ನಡೆಸಿದೆ. ದೆಹಲಿಯಲ್ಲಿ ಸುಮಾರು 261 ಕಂಟೋನ್ಮೆಂಟ್ ಜೋನ್ ಗಳಿದ್ದು, 66,000 ಕ್ಕೂ ಹೆಚ್ಚು ಜನರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ.
ರಾಜ್ಯದಲ್ಲಿ ಪ್ರತಿದಿನ ಸುಮಾರು 2,500 ಜನರಿಗೆ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, 75 ಮಂದಿ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ ಎಂದು ದೆಹಲಿ ಸರ್ಕಾರ ತಿಳಿಸಿದೆ








