ನವದೆಹಲಿ, ಮೇ 29 : ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಸಿಕ್ಕ ಸಿಕ್ಕವರ ದೇಹಹೊಕ್ಕಿ ಆರ್ಭಟಿಸುತ್ತಿದೆ. ಇನ್ನೂ ಮೂರು ದಿನಗಳಲ್ಲಿ 4ನೇ ಹಂತದ ಲಾಕ್ ಡೌನ್ ಮುಗಿಯಲಿದ್ದು, 5ನೇ ಹಂತದ ಲಾಕ್ ಡೌನ್ ಜಾರಿಗೆ ಸರ್ಕಾರ ಪ್ಲಾನ್ ಮಾಡಿಕೊಳ್ಳುತ್ತಿದೆ. ಲಾಕ್ ಡೌನ್ 5.0ರಲ್ಲಿ ಹಲವು ವಿನಾಯಿತಿಗಳ ನಿರೀಕ್ಷೆಯಲ್ಲಿರುವ ಜನರಿಗೆ ಇಂದಿನ ಹೆಲ್ತ್ ಬುಲೆಟಿನ್ ಶಾಕ್ ನೀಡಿದೆ.
ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ, ಇಂದು ದಾಖಲೆಯ ಪ್ರಮಾಣದಲ್ಲಿ ಹೊಸ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿದೆ. ಕಳೆದ 24 ಗಂಟೆಗಳಲ್ಲಿ 7,466 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಒಂದು ದಿನದಲ್ಲಿ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಇದರಿಂದಾಗಿ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,65,799ಕ್ಕೆ ಏರಿಕೆಯಾಗಿದೆ.
ಇನ್ನು ನಿನ್ನೆ ಒಂದೇ ದಿನ ಕೊರೊನಾ ಸೋಂಕಿಗೆ 175 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ದೇಶದಲ್ಲಿ ಈ ವರೆಗೆ ವೈರಸ್ ಗೆ ಬಲಿಯಾದವರ ಸಂಖ್ಯೆ 4706ಕ್ಕೆ ತಲುಪಿದೆ. ಉಳಿದಂತೆ ಮಹಾರಾಷ್ಟ್ರದಲ್ಲಿ 2598, ದೆಹಲಿಯಲ್ಲಿ 1024, ತಮಿಳುನಾಡಿನಲ್ಲಿ 827, ಗುಜರಾತ್ ನಲ್ಲಿ 367, ಮಧ್ಯಪ್ರದೇಶದಲ್ಲಿ 192 ಹೊಸ ಪ್ರಕರಣಗಳು ದಾಖಲಾಗಿವೆ.
ಇದೇ ವೇಳೆ ಇತ್ತೀಚೆಗಷ್ಟೇ ಜಾಗತಿಕ ಪಟ್ಟಿಯಲ್ಲಿ ಅತಿ ಹೆಚ್ಚು ಸೋಂಕಿತರ ಸ್ಥಾನದಲ್ಲಿ 10ನೇ ಸ್ಥಾನಕ್ಕೆ ಏರಿದ್ದ ಭಾರತ, ಇದೀಗ ಟರ್ಕಿಯನ್ನು ಹಿಂದಿಕ್ಕಿ 9ನೇ ಸ್ಥಾನದಲ್ಲಿದೆ.