ದಯವಿಟ್ಟು ಎಚ್ಚೆತ್ತುಕೊಳ್ಳಿ : ಕೇಂದ್ರದ ವಿರುದ್ಧ ಸೋನಿಯಾ ಗಾಂಧಿ ಗರಂ
ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಜೊತೆಗೆ ಕೊರೊನಾ ಸಾವುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಇಂದು ದೇಶದಾದ್ಯಂತ 4 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರಕ್ಕೆ ಒಂದಿಷ್ಟು ಸಲಹೆಗಳನ್ನ ನೀಡಿದ್ದಾರೆ.
ಜೊತೆಗೆ ಕೊರೊನಾ ವಿಚಾರದಲ್ಲಿ ಸರ್ಕಾರದ ಜೊತೆ ಕಾಂಗ್ರೆಸ್ ನಿಲ್ಲಲಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಸೋನಿಯಾ ಗಾಂಧಿ, ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಎಚ್ಚೆತ್ತುಕೊಂಡು ತಮ್ಮ ಕರ್ತವ್ಯ ನಿರ್ವಹಿಸಬೇಕಾಗಿದೆ.
ದೇಶದ ಎಲ್ಲರಿಗೂ ಉಚಿತವಾಗಿ ಕೊರೊನಾ ವ್ಯಾಕ್ಸಿನ್ ನೀಡಬೇಕು. ಹೀಗಾಗಿ ಲಸಿಕೆ ವೇಗವಾಗಿ ಉತ್ಪಾದನೆ ಮಾಡಲು ಕಡ್ಡಾಯ ಪರವಾನಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ವಿಡಿಯೋದಲ್ಲಿ ಸರ್ಕಾರಕ್ಕೆ ಒಂದಿಷ್ಟು ಸಲಹೆಗಳನ್ನೂ ಕೊಟ್ಟಿರುವ ಸೋನಿಯಾ ಗಾಂಧಿ, ಕೋವಿಡ್ ಬಿಕ್ಕಟ್ಟು ಎದುರಿಸಲು ರಾಷ್ಟ್ರೀಯ ನೀತಿ ರೂಪಿಸಬೇಕು. ಅದರಲ್ಲಿ ಯಾವುದೇ ರೀತಿಯ ರಾಜಕೀಯ ತರಬಾರದು ಎಂದಿದ್ದಾರೆ. ಜೊತೆಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ಬಡವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ 6 ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿದ್ದಾರೆ.










