ಕೊರೋನಾ ಸಾವಿನ ಲೆಕ್ಕ ಬಚ್ಚಿಟ್ಟ ಎರಡು ರಾಜ್ಯಗಳು
ಹೊಸದಿಲ್ಲಿ, ಜೂನ್ 12: ಕೊರೋನಾ ವಿಚಾರದಲ್ಲಿ ಚೀನಾ ಸಾಂಕ್ರಾಮಿಕದ ಗಂಭೀರತೆಯನ್ನು ಜಗತ್ತಿಗೆ ಮುಚ್ಚಿಟ್ಟು ಜಗತ್ತಿಗೆ ಕೊರೋನಾ ಹರಡಲು ಕಾರಣವಾದ ಆರೋಪವನ್ನು ಎದುರಿಸುತ್ತಿದೆ.

ಇದೀಗ ಭಾರತದ ಎರಡು ರಾಜ್ಯಗಳು ಅದೇ ಹಾದಿಯನ್ನು ಹಿಡಿದಿದ್ದು, ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟು ಆಟವಾಡುತ್ತಿದೆ ಎಂಬ ವಿಚಾರ ಕೇಳಿಬರುತ್ತಿದೆ. ಇದೀಗ ದೆಹಲಿ ಮತ್ತು ತಮಿಳುನಾಡಿನಲ್ಲಿ ಪ್ರಕಟವಾಗಿರುವ ಸಾವಿನ ಸಂಖ್ಯೆಯಲ್ಲಿ ಭಾರೀ ಏರುಪೇರಾಗಿರುವ ವಿಚಾರ ಬೆಳಕಿಗೆ ಬಂದಿದೆ.
ದೆಹಲಿಯ ಆಪ್ ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಿದ್ದು, ವರದಿಗಳ ಪ್ರಕಾರ ರಾಜಧಾನಿ ದೆಹಲಿಯಲ್ಲಿ 984 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಆದರೆ ಬಿಜೆಪಿ ಆಡಳಿತ ಇರುವ ದೆಹಲಿ ಮಹಾನಗರ ಪಾಲಿಕೆ ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದ ಒಟ್ಟು 2098 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ಮಹಾನಗರ ವ್ಯಾಪ್ತಿಯ ಚಿತಾಗಾರಗಳಲ್ಲಿ ಇಲ್ಲಿಯವರೆಗೆ 2089 ಕೊರೊನಾ ಸೋಂಕಿತರ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂಬ ಮಾಹಿತಿಯ ಅನ್ವಯ ಮಹಾನಗರ ಪಾಲಿಕೆ ಸಾವನ್ನಪ್ಪಿದವರ ಲೆಕ್ಕವನ್ನು ನೀಡಿದೆ.

ಅಷ್ಟೇ ಅಲ್ಲ ತಮಿಳುನಾಡಿನಲ್ಲಿ ಕೂಡ ಕನಿಷ್ಠ 200 ಸಾವುಗಳ ಲೆಕ್ಕ ಬಿಟ್ಟು ಹೋಗಿದೆ ಎಂಬ ಆರೋಪ ಕೇಳಿಬಂದಿದೆ. ತಮಿಳುನಾಡು ರಾಜ್ಯ ಸರ್ಕಾರದ ಮಾಹಿತಿಯ ಅನ್ವಯ ಇಲ್ಲಿಯವರೆಗೆ ರಾಜ್ಯದಲ್ಲಿ 326 ಮಂದಿ ಸಾವನ್ನಪ್ಪಿದ್ದು ಅದರಲ್ಲಿ 260 ಜನರು ರಾಜಧಾನಿ ಚೆನ್ನೈ ಒಂದರಲ್ಲೇ ಸಾವನ್ನಪ್ಪಿದ್ದಾರೆ. ಆದರೆ ನಗರದ ವಿವಿಧ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜಿನಲ್ಲಿ 200ಕ್ಕೂ ಹೆಚ್ಚು ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದು, ಈ ಲೆಕ್ಕಾಚಾರ ರಾಜ್ಯ ಆರೋಗ್ಯ ಇಲಾಖೆಯನ್ನೇ ತಲುಪಿಲ್ಲ ಎಂಬ ಆರೋಪ ಇದೀಗ ಕೇಳಿಬಂದಿದೆ. ಆದರೆ ತಮಿಳುನಾಡು ರಾಜ್ಯ ಸರ್ಕಾರ ಇದನ್ನು ಅಲ್ಲಗಳೆದಿದೆ.








