ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗೆ ಕೊರೊನಾ ಬಂದಿಲ್ಲ – ಸುರೇಶ್ ಕುಮಾರ್ ಸ್ಪಷ್ಟನೆ
ಚಾಮರಾಜನಗರ, ಜೂನ್ 29: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗೆ ಕೊರೊನಾ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಾಸನದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೊಬ್ಬನಿಗೆ ಡೆಂಗ್ಯೂ ಚಿಕಿತ್ಸೆ ನೀಡುವ ವೇಳೆ ಆತನ ಗಂಟಲ ದ್ರವವನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆ ವಿದ್ಯಾರ್ಥಿ ಪರೀಕ್ಷೆ ಬರೆಯುವ ಸಮಯದಲ್ಲಿ ಆತನ ಪರೀಕ್ಷಾ ವರದಿ ಹೊರಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗೆ ಕೊರೊನಾ ಬಂದಿಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಆತನೊಂದಿಗೆ ಪರೀಕ್ಷೆ ಬರೆದಿದ್ದ 19 ವಿದ್ಯಾರ್ಥಿಗಳ ಗಂಟಲ ದ್ರವವನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅವರೆಲ್ಲರಿಗೂ ನೆಗೆಟಿವ್ ಎಂದು ವರದಿ ಬಂದಿದೆ. ಹಾಗಾಗಿ ಯಾರು ಸಹ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ತಜ್ಞರ ಸಲಹೆಯಂತೆ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗಿದ್ದು, ಮಕ್ಕಳ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಯಾವುದೇ ವಿದ್ಯಾರ್ಥಿಗಳ ಮೇಲೂ ಏನೂ ಸಮಸ್ಯೆಯಾಗದ ರೀತಿಯಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಈಗಾಗಲೇ ಎರಡು ದಿನ ಪರೀಕ್ಷೆಗಳನ್ನು ಮುಗಿಸಿದ್ದೇವೆ. ಉಳಿದ ಪರೀಕ್ಷೆಗಳನ್ನು ಸಹ ಸುರಕ್ಷಿತ ಕ್ರಮಗಳನ್ನು ಕೈಗೊಂಡು ಯಶಸ್ವಿಯಾಗಿ ನಡೆಸುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದರು.