ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ತೆಗೆದುಕೊಂಡಿವೆ. ವಿಚಿತ್ರ ಏನೆಂದ್ರೆ ಭಾರತದಲ್ಲಿ ಕೊರೊನಾ ವೈರಸ್ ಗಿಂತ ಅದರ ಕುರಿತು ವದಂತಿಗಳೇ ಹೆಚ್ಚಾಗಿ ಹರಡುತ್ತಿವೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ವಿವಿಧ ಇಲಾಖೆಗಳು ಶ್ರಮಿಸುತ್ತಿದ್ದು, ನಿರಂತರವಾಗಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಚಿಕಿತ್ಸೆಗೆ ನಿಂಬೆಹಣ್ಣು, ಅರಿಶಿನ ರಾಮಬಾಣ ಎಂಬ ಸುದ್ದಿ ಭಾರಿ ವೈರಲ್ ಆಗುತ್ತಿದೆ. ಜನರು ಕೂಡ ಇದನ್ನು ನಂಬಿ ಬೇರೆಯವರಿಗೂ ಶೇರ್ ಮಾಡುತ್ತಿದ್ದಾರೆ. ಇದೀಗ ಈ

ಸಂದೇಶವನ್ನು ಕೇಂದ್ರ ವಾರ್ತಾ ಇಲಾಖೆ ಅಲ್ಲಗೆಳೆದಿದೆ. ನಿಂಬೆಹಣ್ಣು ಹಾಗೂ ಅರಿಶಿನದಿಂದ ಕೊರೊನಾವೈರಸ್ ಕೊಲ್ಲಲು ಸಾಧ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ದಿನನಿತ್ಯ ಅಡುಗೆಯಲ್ಲಿ ನಿಂಬೆ ಹಣ್ಣು, ಅರಿಶಿನವನ್ನು ಯಥೇಚ್ಛವಾಗಿ ಬಳಸುವುದರಿಂದ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಾಗಬಹುದು. ಆದರೆ, ಇದರಿಂದ ಕೊರೊನಾ ಪಿಡುಗು ನಿರ್ಮೂಲನೆ ಸಾಧ್ಯವಿಲ್ಲ ಎಂದು ಕೇಂದ್ರ ವಾರ್ತಾ ಇಲಾಖೆ ಸ್ಪಷ್ಟಪಡಿಸಿದೆ.
ವಿಜ್ಞಾನಿಗಳು ಹೇಳುವುದೇನು?
ನಿಂಬೆಹಣ್ಣು, ಅರಿಶಿನ ಬಳಸುವುದರಿಂದ ಕೊರೊನಾ ವೈರಸನ್ನು ಕೊಲ್ಲಲು ಸಾಧ್ಯವಿಲ್ಲ ಸರಿ. ಆದ್ರೆ ಇವುಗಳನ್ನು ಬಳಸುವುದರಿಂದ ಕೊರೊನಾ ಬಾರದಂತೆ ತಡೆಗಟ್ಟಬಹುದು ಎಂಬುದಕ್ಕೂ ಸ್ಪಷ್ಟವಾದ ಉತ್ತರ ವಿಜ್ಞಾನಿ, ವೈದ್ಯರಲ್ಲಿಲ್ಲ. ಪೌಷ್ಟಿಕ ಆಹಾರ, ಹಣ್ಣು ತಿನ್ನುವ ಮೂಲಕ ಸಮತೋಲಿತ ಆಹಾರ ಪದ್ಧತಿ ಹೊಂದಿ, ದಿನನಿತ್ಯ ವ್ಯಾಯಾಮ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಯಾವುದೇ ಆಹಾರ ಸೇವನೆಯಿಂದ ಕೊರೊನಾ ವೈರಾಣು ತಡೆಗಟ್ಟಲು ಸಾಧ್ಯವಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.