ಕೊರೊನಾ ಹೊಡೆತಕ್ಕೆ ಇಡೀ ವಿಶ್ವವೇ ಬೀಗಮುದ್ರೆ ಹಾಕಿಕೊಂಡಿದೆ. ಕೊರೊನಾ ಸೋಂಕು ಹರಡುವ ಭೀತಿಯಿಂದ ಅನೇಕ ಕಂಪನಿಗಳು ಬಾಗಿಲು ಮುಚ್ಚಿ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ಇದರ ಪರಿಣಾಮ ವಸ್ತುಗಳ ಕೊರತೆ ಎದುರಾಗಿದ್ದು, ಇದಕ್ಕೆ ಕಾಂಡೋಮ್ ಸಹ ಹೊರತಾಗಿಲ್ಲ.
ಕೊರೊನಾ ಹೊಡೆತಕ್ಕೆ ವಿಶ್ವದ ಬಹತೇಕ ರಾಷ್ಟ್ರಗಳು ಲಾಕ್ ಡೌನ್ ಆಗಿವೆ. ದಿನ ಬಳಕೆ ವಸ್ತುಗಳು, ಮಾಸ್ಕ್, ಸ್ಯಾನಿಟೈಸರ್ ಗಳಿಗಾಗಿ ಜನರು ಮುಗಿಬೀಳುತ್ತಿದ್ದಾರೆ. ಅದರಂತೆ ಮಾರುಕಟ್ಟೆಯಲ್ಲಿ ಕಾಂಡೋಮ್ ಗಳ ಬೇಡಿಕೆಯೂ ಸಹ ಹೆಚ್ಚಾಗಿದೆ. ಪುರುಷರು, ಮಹಿಳೆಯರು ಎಂಬ ವ್ಯತ್ಯಾಸವಿಲ್ಲದೆ ಜನರು ಕಾಂಡೋಮ್ ಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ವರದಿಗಳು ಬಹಿರಂಗ ಪಡಿಸಿವೆ.
ಕೊರೊನಾ ಭೀತಿ ಹಿನ್ನೆಲೆ ಜಾಗತಿಕವಾಗಿ ಅತಿ ಹೆಚ್ಚು ಕಾಂಡೋಮ್ ಉತ್ಪಾದಿಸುವ ಮಲೇಷಿಯಾದ ಕರೆಕ್ಷ್ ಬರ್ಹ್ಯಾಡ್ ಕಂಪನಿ ಲಾಕ್ ಡೌನ್‌ನಿಂದಾಗಿ ತನ್ನ ಮೂರು ಕಾರ್ಖಾನೆಯಲ್ಲಿ ಒಂದೇ ಒಂದು ಕಾಂಡೋಮ್ ಅನ್ನು ಕಳೆದ 10 ದಿನಗಳಿಂದ ಉತ್ಪಾದಿಸಿಲ್ಲ. ಇದರ ಪರಿಣಾಮವಾಗಿ ಈಗಾಗಲೇ 10 ಕೋಟಿ ಕಾಂಡೋಮ್ ಗಳ ಕೊರತೆ ಎದುರಾಗಿದೆ.
ಇನ್ನು ಕೊರೊನಾ ತವರು ಚೀನಾ ಕೂಡ ಹೆಚ್ಚು ಕಾಂಡೋಮ್ ಉತ್ಪಾದಿಸುವ ದೇಶವಾಗಿದ್ದು, ಕಳೆದ ಎರಡು ತಿಂಗಳು ಇಲ್ಲಿಯೂ ಕೂಡ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ಅನೇಕ ಕಾಂಡೋಮ್ ಉತ್ಪಾದಿಸುವ ಕಂಪನಿಗಳು ಬೀಗಮುದ್ರೆ ಜಡಿದಿದ್ದವು. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಈಗ ಕಾಂಡೋಮ್ ಗಳ ಕೊರತೆ ಎದುರಾಗಿದೆ.