ಕೊರೊನಾ ಹೊಡೆತಕ್ಕೆ ಮನರಂಜನಾ ಕ್ಷೇತ್ರ ತತ್ತರಿಸಿ ಹೋಗಿದೆ. ಲಾಕ್ ಡೌನ್ ನಿಂದಾಗಿ ಸಿನಿಮಾವನ್ನೇ ಮೆಚ್ಚಿಕೊಂಡಿರುವ ಜನರು ತತ್ತರಿಸಿ ಹೋಗಿದ್ದಾರೆ. ಸದ್ಯ ಲಾಕ್ ಡೌನ್ ಸಡಿಲಿಕೆಯಿಂದಾಗಿ ಸಿನಿ ಜಗತ್ತಿನ ಚುಟವಟಿಕೆಗಳು ಆರಂಭವಾದರೂ ಸಿನಿಮಾ ರಂಗ ಚೇತರಿಸಿಕೊಳ್ಳಲು ವರ್ಷಗಳೇ ಬೇಕಾದೀತು. ಏಕೆಂದರೆ ಚಿತ್ರರಂಗ ಅವಲಂಬಿಸಿರುವುದು ಜನರನ್ನು.
ಪ್ರೇಕ್ಷಕರು ಇದ್ದರೆ ಮಾತ್ರವೇ ಚಿತ್ರರಂಗ ನಡೆಯುತ್ತದೆ. ಹಣ ಹುಟ್ಟುತ್ತದೆ, ಅದರಿಂದ ಸಿನಿ ಕಾರ್ಮಿಕರು, ನಿರ್ಮಾಪಕರು ಮತ್ತು ಇತರರಿಗೆ ಆದಾಯ ಬರುತ್ತದೆ ಹಾಗೆಯೇ ಹೊಸ ಸಿನಿಮಾಗಳ ಸೃಷ್ಟಿಯಾಗುತ್ತದೆ. ಆದರೆ ಚಿತ್ರರಂಗ ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ಅದನ್ನು ನೆಚ್ಚಿಕೊಂಡವರ ಬದುಕೂ ಅತಂತ್ರವಾಗಿದೆ.
ಈ ಎಲ್ಲದರ ನಡುವೆ ಸರ್ಕಾರಕ್ಕೆ ಸಿನಿಮಾ ಟಿಕೆಟ್ ಗಳ ಮೇಲೆ 5 ರೂಪಾಯಿ ಹೆಚ್ಚಳ ಮಾಡಬೇಕೆಂದು ನಿರ್ಮಾಪಕರು ಬೇಡಿಕೆಯಿಟ್ಟಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಗುರುವಾರ ಭೇಟಿ ಮಾಡಿದ್ದ ಚಿತ್ರರಂಗದ ಗಣ್ಯರ ನಿಯೋಗ, ಚಿತ್ರೀಕರಣ ಆರಂಭ, ಚಿತ್ರಪ್ರದರ್ಶನಗಳಿಗೆ ಅನುಮತಿ, ಚಿತ್ರೋದ್ಯಮಕ್ಕೆ ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಇರಿಸಿತ್ತು. ಅದರಲ್ಲಿ ನಿರ್ಮಾಪಕರ ಸಂಘದಿಂದ ಟಿಕೆಟ್ ದರ ಹೆಚ್ಚಳದ ಪ್ರಸ್ತಾಪವೂ ಸೇರಿದೆ.
ಇನ್ನು ಈ ವಿಚಾರವಾಗಿ ನಿರ್ಮಾಪಕ ಸಾ.ರಾ ಗೋವಿಂದು ಮಾಧ್ಯಮಗಳ ಜೊತೆ ಮಾತನಾಡಿದ್ದು, ಟಿಕೆಟ್ ಮೇಲೆ ಐದು ರೂ ಜಾಸ್ತಿ ಮಾಡಿ, ಅದರಿಂದ ಬಂದ ಹಣವನ್ನು ನಿರ್ಮಾಪಕರು, ಹಂಚಿಕೆದಾರರಿಗೆ ಸಹಾಯ ಆಗುವಂತೆ ಕ್ಷೇಮ ನಿಧಿ ಮಾಡುವಂತೆ ಕೇಳಿದ್ದೇವೆ. ಈ ಬೇಡಿಕೆಗೆ ಒಪ್ಪಿಕೊಳ್ಳುತ್ತಾರೋ ಬಿಡುತ್ತಾರೋ ಗೊತ್ತಿಲ್ಲ’. ಜನರು ಕಷ್ಟದಲ್ಲಿದ್ದಾರೆ. ಇಲ್ಲ ಎನ್ನುವುದು ಸಾಧ್ಯವೇ ಇಲ್ಲ. ಆದರೆ ಚಿತ್ರೋದ್ಯಮದ ಸಮಸ್ಯೆಯನ್ನೂ ಒಂದು ಕಡೆ ನೋಡಬೇಕು. ಆನ್ ಲೈನ್‌ನಲ್ಲಿ ಟಿಕೆಟ್ ಖರೀದಿಸುವಾಗ ಪ್ರೇಕ್ಷಕರು 30-40 ರೂ ಜಾಸ್ತಿ ಕೊಡುತ್ತಾರೆ. ಹಾಗಾಗಿ 5 ರೂ ಹೆಚ್ಚು ಎನಿಸುವುದಿಲ್ಲ. ನಾವು ಪ್ರಸ್ತಾಪ ಇರಿಸಿರುವುದಷ್ಟೇ. ಸರ್ಕಾರ ಎಷ್ಟು ಹೆಚ್ಚು ಮಾಡುತ್ತದೆಯೋ ತಿಳಿದಿಲ್ಲ’ ಎಂದು ಹೇಳಿದ್ದಾರೆ.








