ಕೊರೊನಾ ಹರಡದಂತೆ ತಡೆಯಲು ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-13, ಮುಂದೂಡಲಾಗಿದೆ. ಈ ಹಿಂದೆ ಮಾರ್ಚ್ 29ರಿಂದ ಐಪಿಎಲ್ ನಡೆಸಲು ತೀರ್ಮಾನಿಸಲಾಗಿತ್ತು. ಆದ್ರೆ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮಾರ್ಚ್ 29 ಬದಲಿಗೆ ಏಪ್ರಿಲ್ 15ರಿಂದ ಐಪಿಎಲ್ ಪ್ರಾರಂಭಿಸಲು ಬಿಸಿಸಿಐ ನಿರ್ಧರಿಸಿದೆ.
ಈಗಾಗಲೇ ಈ ಬಗ್ಗೆ ಬಿಸಿಸಿಐ ಐಪಿಎಲ್ ನ ಫ್ರಾಂಚೈಸಿಗಳಿಗೆ ಮಾಹಿತಿ ನೀಡಿದೆ. ಆದ್ರೆ ತಂಡಗಳ ಮಾಲೀಕರಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಿಸಿಸಿಐ ಮೂಲಗಳು ಹೇಳುತ್ತಿವೆ. ಇನ್ನು ಐಪಿಎಲ್ ಮುಂದೂಡುವ ಬಗ್ಗೆ ನಾಳೆ ಮುಂಬೈನಲ್ಲಿ ನಡೆಯುವ ಸಭೆಯಲ್ಲಿ ಬಿಸಿಸಿಐ ಮತ್ತು ಐಪಿಎಲ್ ಗವರ್ನಿಂಗ್ ಕೌನ್ಸಿಲ್, ಅಂತಿಮ ನಿರ್ಧಾರ ಹೊರಡಿಸುವ ಸಾಧ್ಯತೆ ಹೆಚ್ಚಿದೆ.
ಮತ್ತೊಂದೆಡೆ ಕೊರೊನಾ ಹರಡುವಿಕೆಯನ್ನು ತಡೆಯುವ ದೃಷ್ಟಿಯಿಂದ ದೆಹಲಿ ಸೇರಿದಂತೆ ಹಲವು ರಾಜ್ಯಗಳು ಎಲ್ಲಾ ಕ್ರೀಡಾಕೂಟಗಳನ್ನು ರದ್ದು ಮಾಡಿವೆ. ದೆಹಲಿಯಲ್ಲಿ ಯಾವುದೇ ಕಾರಣಕ್ಕೂ ಐಪಿಎಲ್ ಆಡಿಸುವುದಿಲ್ಲ ಎಂದು ದೆಲ್ಲಿ ಸರ್ಕಾರ ಘೋಷಣೆ ಮಾಡಿದೆ. ಇತ್ತ ಕರ್ನಾಟಕದಲ್ಲೂ ಸಹ ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧ ಎಂದು ಕೆಎಸ್ ಸಿಎ ಹೇಳಿದೆ.