ದಾವಣಗೆರೆ: ಜಗತ್ತಿಗೆ ನಾವೇ ಸಾಮ್ರಾಟರು ಎಂದು ಬೀಗುತ್ತಿದ್ದ ದೇಶಗಳೆಲ್ಲಾ ಕೊರೊನಾಸುರನ ಹೊಡೆತಕ್ಕೆ ಕಮಕ್ ಕಿಮಕ್ ಎನ್ನುತ್ತಿಲ್ಲ. ಕೊರೊನಾ ವೈರಸ್ ಮುಂದೆ ಅತ್ಯಂತ ಬಲಿಷ್ಠ ರಾಷ್ಟ್ರಗಳೇ ಮಂಡಿಯೂರಿವೆ. ಏತನ್ಮಧ್ಯೆ ಏಪ್ರಿಲ್ 15ಕ್ಕೆ ಚತುರ್ ಗ್ರಹಗಳ ಸಮ್ಮಿಲನದಿಂದ ಇಡೀ ಜಗತ್ತು ಕೊರೊನಾ ವೈರಸ್ ವಿರುದ್ಧ ಹೋರಾಡುವ ಧನಾತ್ಮಕ ಶಕ್ತಿ ಸಿಗಲಿದೆ. ಕೊರೊನಾ ಬಲ ಕುಗ್ಗಲಿದೆ ಎಂದು ಮಲೇಬೆನ್ನೂರು ವಿನಾಯಕ ನಗರ ಕ್ಯಾಂಪಿನ ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆ ಮಠ ಹಾಗೂ ಶ್ರೀ ಶಾಸ್ತ್ರ ಪೀಠದ ಶ್ರೀ ಡಾ. ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಏಪ್ರಿಲ್ 15ಕ್ಕೆ ಸೂರ್ಯಗ್ರಹಣ ಮೇಷ ರಾಶಿಯಲ್ಲಿ ಉಚ್ಚನಾಗಿರುವುದರಿಂದ ಅನೇಕ ಕಾಯಿಲೆಗಳಿಗೆ ಮದ್ದು ಸಿಗಲಿದ್ದು, ಜನರಿಂದ ಅನಾರೋಗ್ಯವನ್ನು ದೂರ ಮಾಡುತ್ತಾನೆ. ರವಿಯು ನವಗ್ರಹಗಳ ಅಧಿಪತಿ ಆಗಿರುವುದರಿಂದ ಸೂರ್ಯಗ್ರಹವು ಆರೋಗ್ಯ, ಅಧಿಕಾರ, ತೇಜಸ್ಸು ನೀಡುವಂಥನಾಗಿರುತ್ತಾನೆ ಮತ್ತು ಶುಕ್ರ ವೃಷಭದಲ್ಲಿ ಇರುವುದರಿಂದ ಆರ್ಥಿಕತೆಯು ಸುಧಾರಣೆಯಾಗಿ ಎಲ್ಲಾ ವರ್ಗದವರಿಗೂ. ಎಲ್ಲಾ ರಾಜ್ಯ ದವರಿಗೂ ವ್ಯಾಪಾರ ವಹಿವಾಟುಗಳು ಬೆಳೆದು ಶುಭದಾಯಕವಾಗಲಿದೆ ಎಂದು ಶ್ರೀ ಡಾ. ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಹೇಳಿದ್ದಾರೆ.
ಕೊರೊನಾ ವಿರುದ್ಧ ಹೋರಾಡುವ ಲಸಿಕೆ
ಕೊರೊನಾ ವಿರುದ್ಧ ಹೋರಾಡುವ ಲಸಿಕೆಗಳು ದೊರೆಯಲಿವೆ. ಬರುವ ಮೇ 28ಕ್ಕೆ ಜಾಗತಿಕವಾಗಿ ಹಿಡಿದಿರುವ ಕಾಳಸರ್ಪ ಯೋಗ ಕೊನೆಗೊಳ್ಳುವುದರಿಂದ ರಾಹುಕೇತುಗಳ ಅನುಗ್ರಹ ಉಂಟಾಗಿ ಈ ರೋಗಗಳು ಕೊನೆಗೊಳ್ಳಲಿವೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ








