ಭಾರತ – ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಪಂದ್ಯಕ್ಕೆ ಕರೋನಾ ಭೀತಿ
ಮಾರ್ಚ್ ೧೨ರಂದು ನಡೆಯಲಿರುವ ಪಂದ್ಯಕ್ಕೆ ವರುಣ ದೇವನ ಕಿರಿಕಿರಿ ?
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯ
ಕರೋನಾ ವೈರಸ್ ಮತ್ತು ಮಳೆರಾಯನ ಭೀತಿಯ ನಡುವೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ಗುರುವಾರ ನಡೆಯಲಿದೆ. ಮಾರ್ಚ್ ೧೨ರಂದು ನಡೆಯಲಿರುವ ಈ ಪಂದ್ಯಕ್ಕೆ ಉಭಯ ತಂಡಗಳು ಸಕಲ ತಯಾರಿಯನ್ನು ಮಾಡಿಕೊಂಡಿವೆ. ಆದ್ರೆ ಜಿದ್ದಾಜಿದ್ದಿನಿಂದ ನಡೆಯಲಿರುವ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ ಕಾಡುವ ಸಾಧ್ಯತೆಗಳು ದಟ್ಟವಾಗಿವೆ. ಹಿಮಾಚಲ ಪ್ರದೇಶದ ರಮಣೀಯ ತಾಣವಾಗಿರುವ ಧರ್ಮಶಾಲಾದಲ್ಲಿ ಈ ಪಂದ್ಯ ನಡೆಯಲಿದೆ.
ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗಳ ಸತತ ಸೋಲಿನಿಂದ ಕಂಗೆಟ್ಟಿರುವ ಟೀಮ್ ಇಂಡಿಯಾಗೆ ತವರಿನಲ್ಲಿ ಅಗ್ನಿಪರೀಕ್ಷೆಯಾಗಲಿದೆ. ತವರಿನಲ್ಲಿ ಗೆಲುವಿನ ಅಭಿಯಾನದಲ್ಲಿರುವ ಕೊಹ್ಲಿ ಪಡೆ ಹರಿಣಗಳ ವಿರುದ್ಧ ಸರಣಿ ಗೆದ್ದು ತನ್ನ ಗೌರವ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ. ಅದೇ ರೀತಿ ಕಳೆದ ಆರು ವರ್ಷಗಳ ನಂತರ ಮೊದಲ ಬಾರಿ ರನ್ ಬರ ಎದುರಿಸಿದ್ದ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಲು ಸಜ್ಜಾಗಿದ್ದಾರೆ.
ಇನ್ನೊಂದೆಡೆ, ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಮತ್ತು ಮಹಮ್ಮದ್ ಸಮಿ ಅವರ ಅನುಪಸ್ಥಿತಿ ಕೊಂಚ ಮಟ್ಟಿಗೆ ಕಾಡಬಹುದು. ಆದ್ರೂ ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ತಂಡವನ್ನು ಸೇರಿಕೊಂಡಿರುವುದು ಪ್ಲಸ್ ಪಾಯಿಂಟ್ ಆಗಲಿದೆ. ಇನ್ನುಳಿದಂತೆ ಟೀಮ್ ಇಂಡಿಯಾ ಆಟಗಾರರು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿದ್ರೆ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿಯುವುದು ಅಸಾಧ್ಯವೇನೂ ಅಲ್ಲ.
ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಕೂಡ ಭಾರತಕ್ಕೆ ಸಡ್ಡು ಹೊಡೆಯಲು ಪ್ಲಾನ್‌ಗಳನ್ನು ಮಾಡಿಕೊಂಡಿದೆ. ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ಕ್ವಿಂಟನ್ ಡಿ ಕಾಕ್ ಮತ್ತು ಡುಪ್ಲೇಸಸ್ ಬ್ಯಾಟಿಂಗ್ ನಲ್ಲಿ ಹೆಚ್ಚಿನ ಬಲ ತುಂಬಲಿದ್ದಾರೆ.
ಟೀಮ್ ಇಂಡಿಯಾ
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಪೃಥ್ವಿ ಶಾ, ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಜಸ್ಪಿçತ್ ಬೂಮ್ರಾ, ನವದೀಪ್ ಸೈನಿ, ಕುಲದೀಪ್ ಯಾದವ್, ಶುಬ್ಮನ್ ಗಿಲ್
ದಕ್ಷಿಣ ಆಫ್ರಿಕಾ
ಕ್ವಿಂಟನ್ ಡಿ ಕಾಕ್ (ನಾಯಕ), ಟೆಂಬಾ ಬವುಮಾ, ರಸೇಯ್ ವಾನ್ ಡೆರ್ ಡುಸಾನ್, ಫಪ್ ಡು ಪ್ಲೇಸಸ್, ಕೈಲ್ ವರ‍್ಯಾನ್, ಹೆನ್ರಿಚ್ ಕ್ಲಾಸೆನ್, ಜನೆಮಾನ್ ಮಾಲನ್ ಡೇವಿಡ್ ಮಿಲ್ಲರ್, ಜಾನ್ ಜಾನ್ ಸ್ಮುಟ್ಸ್ ಮ ಆಂಡಿಲೆ ಫೆಹ್ಲಕ್ವಾಯೋಮ ಲುಂಗಿನಿಗಿಡಿ, ಲುಥೋ ಸಿಪಮ್ಲಾ, ಬ್ಯುರನ್ ಹೆಂಡ್ರಿಕ್ಸ್, ಆನ್ರಿಚ್ ನೊರ್ಟ್ಜೆ ಜಾರ್ಜ್ ಲಿಂಡೆ, ಕೆಶವ್ ಮಹಾರಾಜ್.








