ರಾಯಚೂರು, ಮೇ 18 : ಗ್ರೀನ್ ಝೋನ್ ಎಂದು ಗುರುತಿಸಲ್ಪಟ್ಟಿದ್ದ ರಾಯಚೂರು ಜಿಲ್ಲೆಗೂ ಕೊರೊನಾ ಸೋಂಕು ಪ್ರವೇಶಿಸಿದೆ. ಮುಂಬೈನಿಂದ ಹಿಂತಿರುಗಿದ ರಾಯಚೂರಿನ ಆರು ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಂದೇ ಕುಟುಂಬದ ಇಬ್ಬರು ಮಹಿಳೆಯರು ಹಾಗೂ ಪುರುಷನಿಗೆ ಮತ್ತು ಮತ್ತೊಬ್ಬ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಇವರು ಮುಂಬೈನಿಂದ ಹಿಂತಿರುಗಿದ್ದರು.
ರಾಯಚೂರಿನ ಅಟೊ ನಗರದ ನಿವಾಸಿಗಳಾದ ಇವರು ಮುಂಬೈಗೆ ವಲಸೆ ಹೋಗಿದ್ದು, ಮೇ 11 ರಂದು ಜಿಲ್ಲೆಗೆ ಆಗಮಿಸಿದ್ದರು. ಅವರ ಗಂಟಲು ದ್ರವ ಮಾದರಿಯನ್ನು ಕೊರೊನಾ ಸೋಂಕು ಪರೀಕ್ಷೆಗೆ ಕಳುಹಿಸಲಾಗಿದ್ದು, ಇದೀಗ ಅವರ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ದೇವದುರ್ಗ ತಾಲೂಕಿನ ಮಸರಕಲ್ ಹಾಗೂ ಸುಲ್ತಾನ್ ಪುರ ಮೂಲದ ಇಬ್ಬರಲ್ಲೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರು ಸರ್ಕಾರಿ ಕ್ವಾರಂಟೈನ್ ನಲ್ಲಿ ಇದ್ದರು.
ಇದೀಗ ಆ ಪ್ರದೇಶಗಳನ್ನು ಕಂಟೋನ್ಮೆಂಟ್ ವಲಯ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಘೋಷಣೆ ಮಾಡಿದ್ದಾರೆ. ಇಲ್ಲಿಯವರೆಗೆ ಹಸಿರು ವಲಯದಲ್ಲಿದ್ದ ರಾಯಚೂರಿನ ಜನತೆಗೆ ಜಿಲ್ಲೆಯಲ್ಲಿ ಆರು ಮಂದಿಯಲ್ಲಿ ಕೊರೊನಾ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ