ಬೆಂಗಳೂರು: ಕೊರೊನಾ ಸೋಂಕು ತಡೆಗೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು 10 ತಿಂಗಳ ಮಗು ಸೇರಿದಂತೆ ಮತ್ತೆ ಎಂಟು ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು ಎಂಟು ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ 10 ತಿಂಗಳ ಮಗುವಿಗೂ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಗಂಡು ಮಗುವನ್ನು ಕೆಲವು ದಿನಗಳ ಹಿಂದೆ ಪೋಷಕರು ಕೇರಳಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಬಂದ ಬಳಿಕ ಮಗುವಿಗೆ ಜ್ವರ ಹಾಗೂ ಶೀತ ಕಾಣಿಸಿಕೊಂಡಿದೆ. ತೀವ್ರ ಜ್ವರ ಹಾಗೂ ಶೀತದಿಂದ ಬಳಲುತ್ತಿದ್ದ ಈ ಮಗುವನ್ನು 23 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಗಂಟಲಿನ ದ್ರವ ಪರೀಕ್ಷೆ ವರದಿ ಬಂದಿದ್ದು , ಮಗುವಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಇದೀಗ ಮಗುವಿನ ಹತ್ತಿರದ ಸಂಬಂಧಿಗಳನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಗುವಿದ್ದ ಗ್ರಾಮಕ್ಕೆ ಹೊರಗಿನವರು ಯಾರು ಪ್ರವೇಶಿಸದಂತೆ ಹಾಗೂ ಗ್ರಾಮಸ್ಥರು ಹೊರ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ.








