ಬಾಗಲಕೋಟೆ: ಆತನಿಗೆ ಮದುವೆಯಾಗಿ ವಾರವಷ್ಟೇ ಕಳೆದಿತ್ತು, ಸರ್ಕಾರಿ ನೌಕರಿಯೂ ಸಿಕ್ಕಿತ್ತು. ಇದೇ ಖುಷಿಯಲ್ಲಿ ತರಬೇತಿಗೆ ಹೊರಡಲು ಸಜ್ಜಾಗಿದ್ದ ನವವಿವಾಹಿತನಿಗೆ ಮಹಾಮಾರಿ ಕೊರೊನಾ ತಗುಲಿದೆ ಎನ್ನಲಾಗಿದೆ. ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಯುವಕನಿಗೆ ಕರೊನಾ ಶಂಕೆ ವ್ಯಕ್ತವಾಗಿದ್ದು, ಇಂದು ಸಂಜೆ ಅಧಿಕೃತವಾಗಿ ಘೋಷಣೆ ಆಗುವ ಸಾಧ್ಯತೆ ಇದೆ.
ಜೂನ್ 12 ರಂದು ಬಾಗಲಕೋಟೆಯ ರೈಲ್ವೆ ನಿಲ್ದಾಣ ಪ್ರದೇಶದಲ್ಲಿರುವ ಮಹಲ್‍ನಲ್ಲಿ ಮದುವೆ ಆಗಿತ್ತು. ಮರುದಿನ ಜೂನ್ 13 ರಂದು ಕಲಾದಗಿ ಗ್ರಾಮದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಒಂದು ಕಡೆ ಮದುವೆ ಸಂಭ್ರಮ, ಮತ್ತೊಂದೆಡೆ, ಹಾವೇರಿ ಅಬಕಾರಿ ಇಲಾಖೆ ಸಬ್ ಇನ್ಸಪೆಕ್ಟರ್ ಹುದ್ದೆಗೆ ನೇಮಕವಾಗಿದ್ದ ಸಂಭ್ರಮ. ಈ ಸಂಭ್ರಮದಲ್ಲೇ ತರಬೇತಿ ಆರಂಭ ಆಗಲಿತ್ತು. ತರಬೇತಿಗೆ ಹಾಜರಾಗುವ ಮುನ್ನ ಅಂದರೆ ಜೂನ್ 15ರಂದು ಹಾವೇರಿಯಲ್ಲಿ ಗಂಟಲು ಮಾದರಿ ಪರೀಕ್ಷೆಗೆ ಒಳಗಾಗಿದ್ದ. ಸ್ವ್ಯಾಬ್ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ.
ಯುವಕನ ಮದುವೆಯಲ್ಲಿ ಯಾರೆಲ್ಲ ಇದ್ರು, ಆತನ ಸಂಪರ್ಕದಲ್ಲಿ ಯಾರು ಬಂದಿದ್ದಾರೆ ಎಂಬುದರ ಬಗೆ ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿ ಮಾಹಿತಿ ಕಲೆಹಾಕಲು ಆರಂಭಿಸಿದ್ದಾರೆ ಎನ್ನಲಾಗಿದೆ.








