ವಾಷಿಂಗ್ಟನ್, ಮೇ 21 : ಮನುಕುಲಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಸೋಂಕು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ 6 ಕೋಟಿ ಮಂದಿಯನ್ನು ಅತಿ ಬಡತನಕ್ಕೆ ದೂಡಲಿದೆ ಎಂದು ವಿಶ್ವ ಬ್ಯಾಂಕ್ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ. ಕೊರೋನಾ ಸೋಂಕು ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿರುವ ಪರಿಣಾಮ ಯಾವುದೂ ಮೊದಲಿನಂತಿಲ್ಲ. ಎಲ್ಲವೂ ಅಸ್ತವ್ಯಸ್ತವಾಗಿದ್ದು, ದೇಶಗಳ ಆರ್ಥಿಕತೆಯನ್ನು ಬುಡಮೇಲು ಮಾಡಿದೆ. ಕೊರೋನಾದಿಂದ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಬಡ ದೇಶಗಳಿಗೆ ದೊಡ್ಡ ಹೊಡೆತ ಬಿದ್ದಿದ್ದು, ಬಡತನದ ತೀವ್ರತೆಯನ್ನು ಹೆಚ್ಚಿಸಿದೆ ಎಂದು ವಿಶ್ವಬ್ಯಾಂಕ್ ಮುಖ್ಯಸ್ಥರು ಎಚ್ಚರಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಾಧಿಸಿದ ಲಾಭವನ್ನು ಅಳಿಸಿ ಹಾಕಿ ದುಡಿಮೆಯನ್ನು ಕಿತ್ತು ಕೊಂಡಿದೆ ಮಾತ್ರವಲ್ಲ ಸುಮಾರು 6 ಕೋಟಿ ಜನರನ್ನು ತೀವ್ರ ಬಡತನಕ್ಕೆ ಕೊರೊನಾ ವೈರಸ್ನ ಬಿಕ್ಕಟ್ಟು ತಳ್ಳಲಿದೆ. ಇದರಿಂದಾಗಿ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂದು ಹೇಳಿದ್ದಾರೆ.
ವಿಶ್ವ ಬ್ಯಾಂಕ್ ವಿಶ್ವದ 100 ರಾಷ್ಟ್ರಗಳ ವಿವಿಧ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುತ್ತಿದ್ದು, ಮುಂದಿನ 15 ತಿಂಗಳಿನಲ್ಲಿ 160 ಶತಕೋಟಿ ಡಾಲರ್ ಮೊತ್ತವನ್ನು ವಿವಿಧ ದೇಶಗಳಲ್ಲಿ ವಿನಿಯೋಗಿಸಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಾಸ್ ಕಾನ್ಫರೆನ್ಸ್ ಕಾಲ್ ನಲ್ಲಿ ಹೇಳಿದ್ದಾರೆ. ಕೊರೋನಾ ಉಂಟು ಮಾಡಿರುವ ಬಿಕ್ಕಟ್ಟಿನಿಂದ ವಿಶ್ವದ ಅರ್ಥಿಕತೆ ಶೇಕಡಾ 5ರಷ್ಟು ಕಡಿಮೆ ಯಾಗ ಬಹುದು ಎಂದು ಅಭಿಪ್ರಾಯ ಪಟ್ಟ ಮಲ್ಪಾಸ್ ಬಡ ದೇಶಗಳ ಮೇಲೆ ಇದರ ಪರಿಣಾಮ ಬಹಳಷ್ಟು ಕೆಟ್ಟದಾಗಿ ಇರುತ್ತದೆ ಎಂದು ಹೇಳಿದ್ದಾರೆ.n ಬಡತನ ನಿರ್ಮೂಲನ ಕಾರ್ಯಕ್ರಮಗಳ ಮೂಲಕ ಕಳೆದ ಮೂರು ವರ್ಷಗಳಿಂದ ಸಾಧಿಸಲಾದ ಪ್ರಗತಿಯನ್ನು ಕೊರೊನಾ ವೈರಸ್ ಎಂಬ ವೈರಾಣು ಬೂದಿ ಮಾಡಿದ್ದು, ಮುಂದಿನ ದಿನಗಳಲ್ಲಿ ವಿಶ್ವವನ್ನೇ ಕೆಟ್ಟ ಅರ್ಥಿಕ ಹಿಂಜರಿತ ಕಾಡಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಾಸ್ ಅಭಿಪ್ರಾಯ ಪಟ್ಟಿದ್ದಾರೆ.
ಇಲ್ಲಿಯವರೆಗೆ ಜಗತ್ತಿನಾದ್ಯಂತ ಕೋಟ್ಯಾಂತರ ಜನರನ್ನು ಕೊರೊನಾ ಸೋಂಕು ಬಾಧಿಸಿದ್ದು, ಲಕ್ಷಾಂತರ ಜನರ ಜೀವವನ್ನು ಕೊರೊನಾ ವೈರಸ್ ಬಲಿ ತೆಗೆದು ಕೊಂಡಿದೆ.
ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ನಂತರ ವಿಶ್ವದ ಇತರ ರಾಷ್ಟ್ರಗಳಿಗೂ ಹಬ್ಬಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದೆ. ಕೊರೊನಾ ದ ಭೀತಿಯಿಂದಾಗಿ ಬಹುತೇಕ ರಾಷ್ಟ್ರಗಳು ಸುಮಾರು ಮೂರು ತಿಂಗಳಿನಿಂದ ಲಾಕ್ ಡೌನ್ ಆದೇಶ ಜಾರಿಗೊಳಿಸಿದ್ದು, ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದವು. ಇದರಿಂದ ದೇಶದೆಲ್ಲೆಡೆ ಬಿಕ್ಕಟ್ಟು ಉಂಟಾಗಿದ್ದು, ಜಾಗತಿಕ ಅರ್ಥಿಕ ಸಂಕಷ್ಟ ಉಂಟಾಗಿದೆ.
ವಿಶ್ವ ಬ್ಯಾಂಕ್ ಇಲ್ಲಿಯವರೆಗೆ ಬಡ ದೇಶಗಳ ಆರೋಗ್ಯ ವ್ಯವಸ್ಥೆ ಸುಧಾರಿಸಲು, ಆರ್ಥಿಕ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ 5.5 ಶತಕೋಟಿ ಡಾಲರ್ ವ್ಯಯಿಸಿದೆ.
ಕೊರೊನಾದಿಂದ ಉಂಟಾಗಿರುವ ಬಿಕ್ಕಟ್ಟಿನಿಂದ ಬಡದೇಶಗಳ ಪರಿಸ್ಥಿತಿ ಸುಧಾರಿಸಲು ವಿಶ್ವ ಬ್ಯಾಂಕ್ ನೆರವು ಒಂದೇ ಸಾಕಾಗದು, ಶ್ರೀಮಂತ ದೇಶಗಳು ದ್ವಿಪಕ್ಷೀಯ ಸಹಕಾರಕ್ಕೆ ಒತ್ತು ನೀಡಿ, ಬಡ ದೇಶಗಳ ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು ಎಂದು ಮಾಲ್ಪಾಸ್ ಕರೆ ನೀಡಿದ್ದಾರೆ. ಅಭಿವೃದ್ಧಿ ಶೀಲ ದೇಶಗಳ ಆದಾಯದ ಮೂಲ ಅಲ್ಲಿನ ನಾಗರಿಕರು ಬೇರೆ ದೇಶಗಳಿಗೆ ಹೋಗಿ ದುಡಿದು ಗಳಿಸುವ ಹಣ ಮತ್ತು ಪ್ರವಾಸೋದ್ಯಮ ಆದಾಯಗಳನ್ನು ಅವಲಂಬಿಸಿದೆ. ಆರ್ಥಿಕತೆಯ ಪುನಶ್ಚೇತನಕ್ಕೆ ಇದು ಅನಿವಾರ್ಯ ಕೂಡ ಆಗಿದೆ ಎಂದು ತಿಳಿಸಿದರು. ಅಭಿವೃದ್ಧಿ ಪ್ರಮಾಣ ಕಡಿಮೆ ಇರುವ ದೇಶಗಳಿಗೆ ನೀಡಿರುವ ಸಾಲದ ಮರು ಪಾವತಿ ಕಂತನ್ನು ಒಂದು ವರ್ಷದ ಅವಧಿಗೆ ಮುಂದೂಡುವ ಪ್ರಸ್ತಾವಕ್ಕೆ ಪೂರಕ ಸ್ಪಂದನೆ ವ್ಯಕ್ತವಾಗಿದ್ದು, ಇಲ್ಲಿಯವರೆಗೆ ಸುಮಾರು 14 ದೇಶಗಳು ಈ ಪ್ರಸ್ತಾವವನ್ನು ಅನುಮೋದಿಸಿವೆ. ಉಳಿದ ದೇಶಗಳಿಂದ ಕೂಡ ಆಶಾದಾಯಕ ಸ್ಪಂದನೆ ವ್ಯಕ್ತವಾಗಿದೆ ಎಂದು ವಿಶ್ವ ಬ್ಯಾಂಕ್ ಮುಖ್ಯಸ್ಥರು ಹೇಳಿದರು.








