ಫಿಲಿಫೈನ್: ಕೊರೊನಾ ಮಹಾಮಾರಿ ಇಡೀ ಚೀನಾ ದೇಶವನ್ನೇ ದಿಗ್ಬಂಧನದಲ್ಲಿರಿಸುವಂತೆ ಮಾಡಿದೆ. ಕೊರೊನಾ ರೌದ್ರನರ್ತನಕ್ಕೆ ಚೀನಾಕ್ಕೆ ಚೀನಾವೇ ಮಂಡಿಯೂರುವಂತೆ ಆಗಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿರುವುದು ಚೀನಿಯರ ನಿದ್ದೆಗೆಡಿಸುವಂತೆ ಮಾಡಿದೆ. ವಿಶ್ವದ ನಾನಾ ದೇಶಗಳು ಈ ಮಾರಕ ವೈರಸ್ ಗೆ ಔಷಧಿಗಳನ್ನು ಕಂಡುಹಿಡಿಯಲು ನಾನಾ ಸಂಶೋಧನೆಗಳನ್ನು ನಡೆಸುತ್ತಿವೆ. ಈ ನಡುವೆ ಕೊರೊನಾ ಸೋಂಕಿತ ಫಿಲಿಫೈನ್ ಮಹಿಳೆಯೊಬ್ಬಳು ಗುಣಮುಖರಾಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡಿದ್ದ ಈ ಕೊರೊನಾ ಸೋಂಕು ಫಿಲಿಫೈನ್ ನ ಇಬ್ಬರು ಪ್ರಜೆಗಳಲ್ಲಿ ಪತ್ತೆಯಾಗಿತ್ತು. ವುಹಾನ್ ನಿಂದ ಜನವರಿ ೨೧ರಂದು ಫಿಲಿಫೈನ್ ಆಗಮಿಸಿದ ವೇಳೆ ಈ ಇಬ್ಬರನ್ನು ಪರೀಕ್ಷೆಗೆ ಒಳಪಡಿಲಾಗಿತ್ತು. ಈ ವೇಳೆ ೩೮ ವರ್ಷದ ಮಹಿಳೆ ಹಾಗೂ ೪೪ ವರ್ಷ ಪುರುಷನ ದೇಹದಲ್ಲಿ ಈ ವೈರಾಣು ಸೇರಿಕೊಂಡಿರುವುದು ಖಚಿತವಾಯಿತು. ಈ ಇಬ್ಬರಿಗೂ ಚಿಕಿತ್ಸೆ ನೀಡಿದ ಫಿಲಿಫೈನ್ಸ್ ವೈದ್ಯರು, ಮಹಿಳೆಯನ್ನು ಉಳಿಸಿದ್ದಾರೆ.
ಇನ್ನು ಮನಿಲಾದಲ್ಲಿ ಚಿಕಿತ್ಸೆ ಪಡೆದ ಮಹಿಳೆ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಫಿಲಿಫೈನ್ಸ್ ಮೂಲಗಳು ತಿಳಿಸಿವೆ.