ಎಸ್.ಎಸ್.ಎಲ್.ಸಿ ಓದುತ್ತಿರುವ ಅವಳಿ ಸಹೋದರಿಯರ ಕೊರೋನಾ ಸಹಾಯವಾಣಿ..!
ಹೊಸದಿಲ್ಲಿ, ಜುಲೈ 17: ಪ್ರಸ್ತುತ ನಡೆಯುತ್ತಿರುವ ಕೊರೋನವೈರಸ್ ಸಾಂಕ್ರಾಮಿಕವು ಜಾಗತಿಕವಾಗಿ ಗಮನಾರ್ಹ ಪ್ರಮಾಣದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪ್ರಕ್ಷುಬ್ಧತೆಯನ್ನು ಉಂಟುಮಾಡಿದೆ. ರೈತರು, ವಲಸೆ ಕಾರ್ಮಿಕರು, ದಿನಗೂಲಿ ನೌಕರರು, ಕೈಗಾರಿಕೋದ್ಯಮಿಗಳವರೆಗೆ ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ರೂಪದಲ್ಲಿ ಈ ಬಿಕ್ಕಟ್ಟಿನಿಂದ ಬಳಲುತ್ತಿದ್ದಾರೆ.
ಈ. ಸಾಂಕ್ರಾಮಿಕದ ಮಧ್ಯೆ ನಾಗರಿಕರು, ಅಗತ್ಯವಿರುವವರಿಗೆ ಸಹಾಯ ಹಸ್ತ ನೀಡಲು ಒಗ್ಗೂಡುತ್ತಿದ್ದಾರೆ. ದೆಹಲಿಯ 16 ವರ್ಷದ ಇಬ್ಬರು ಅವಳಿ ಸಹೋದರಿಯರು ಇದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ. ತೊಂದರೆಯಲ್ಲಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ, ಆಶೀರ್ ಮತ್ತು ಆಸೀಸ್ ಕಂಧಾರಿ ಇತ್ತೀಚೆಗೆ ತಮ್ಮ ಸ್ನೇಹಿತರಾದ ಅಮನ್ ಬಂಕಾ ಮತ್ತು ಆದಿತ್ಯ ದುಬೆ ಅವರೊಂದಿಗೆ ಕೋವಿಡ್-19 ಸಹಾಯವಾಣಿಯನ್ನು ಪ್ರಾರಂಭಿಸಿದರು.
ಇವರಿಬ್ಬರು ಆಹಾರ ವಿತರಣಾ ಕೇಂದ್ರ, ಕಾಲೇಜು ವಿದ್ಯಾರ್ಥಿಗಳು, ಮತ್ತು ಸ್ವಯಂಸೇವಕರ ಸಹಭಾಗಿತ್ವದಲ್ಲಿ ಬಡವರಿಗೆ ಮತ್ತು ಕಷ್ಟದಲ್ಲಿ ಇರುವವರಿಗೆ ಆಹಾರ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಿದರು.
ಕಂಧಾರಿ ಸಹೋದರಿಯರಿಬ್ಬರೂ, ತಮ್ಮ 10 ನೇ ತರಗತಿ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ, ಯಾವುದೇ ಪ್ರತಿಫಲದ ನಿರೀಕ್ಷೆ ಇಲ್ಲದೆ ಇವರು 24 X 7 ಸಹಾಯವಾಣಿಯನ್ನು ಪ್ರಾರಂಭಿಸಿದರು. ಆಹಾರ, ಔಷಧಿಗಳು ಅಥವಾ ಇತರ ಅಗತ್ಯ ವಸ್ತುಗಳ ಅವಶ್ಯಕತೆಯಿರುವ ಯಾರಾದರೂ + 91-9529863506 ಗೆ ಕರೆಮಾಡಿದರೆ ಅವರಿಗೆ ಅದನ್ನು ಒದಗಿಸುವ ವ್ಯವಸ್ಥೆಯನ್ನು ಇವರು ಮಾಡುತ್ತಿದ್ದರು.
ದೆಹಲಿ ವಿಶ್ವವಿದ್ಯಾಲಯ, ಹಿಂದೂ ಕಾಲೇಜು, ಮತ್ತು ಸೇಂಟ್ ಸ್ಟೀಫನ್ಸ್ ವಿದ್ಯಾರ್ಥಿಗಳು ಸಹ ಇವರ ಜೊತೆ ಈ ಕೆಲಸಕ್ಕೆ ಕೈಜೋಡಿಸಿದರು ಮತ್ತು ಮೈದಾನದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದರು. ದೆಹಲಿ ಪೊಲೀಸರೂ ಕೂಡ ಇವರಿಗೆ ಬೆಂಬಲ ನೀಡಿದರು.
ಆಶೀರ್ ತಾವು ಸಹಾಯಹಸ್ತ ಚಾಚಿರುವ ಬಹಳಷ್ಟು ಘಟನೆಗಳಲ್ಲಿ ಒಂದನ್ನು ಹಂಚಿಕೊಂಡಿದ್ದು,
ಒಮ್ಮೆ ರಾತ್ರಿ 3 ಗಂಟೆಗೆ ತನ್ನ ಮಗಳು 103 ಡಿಗ್ರಿ ಜ್ವರದಿಂದ ಬಳಲುತ್ತಿದ್ದಾಳೆ ಎಂದು ತಾಯಿಯೊಬ್ಬರು ನಮಗೆ ಕರೆಮಾಡಿದರು. ನಾನು ಮುಂಜಾನೆ 3 ಗಂಟೆಗೆ ಎಚ್ಚರಗೊಂಡು, ಪೊಲೀಸರನ್ನು ಸಂಪರ್ಕಿಸಿ, ಅಗತ್ಯವಾದ ಔಷಧಿಗಳನ್ನು ಕಳುಹಿಸಿದ್ದೇನೆ. ಈ ತಾಯಿ-ಮಗಳು ಇರುವ ಪ್ರದೇಶವನ್ನು ಪೊಲೀಸರು ಸಂಪರ್ಕಿಸಿ ಅವರಿಗೆ ಔಷಧಿ ನೀಡಿದರು. ಕೆಲವು ದಿನಗಳ ನಂತರ ಅವರು ನಮಗೆ ಕರೆ ಮಾಡಿ ಮಗಳು ಹುಶಾರಾಗಿರುವುದಾಗಿ ತಿಳಿಸಿದರು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೆ, ದೆಹಲಿ-ಎನ್ಸಿಆರ್ ಪ್ರದೇಶದ ಹೊರತಾಗಿ 30 ಕ್ಕೂ ಹೆಚ್ಚು ನಗರಗಳಲ್ಲಿನ ಜನರಿಗೆ ಆಶೀರ್ ಮತ್ತು ಆಸೀಸ್ ಸಹಾಯ ಮಾಡಿದ್ದಾರೆ.