ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಇಂದು 105 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆ ಆಗಿದೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ರಾಜ್ಯದ 105 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆಯಾಗಿದೆ. ಇಂದು ಚಿಕ್ಕಬಳ್ಳಾಪುರದಲ್ಲಿ ಬರೋಬ್ಬರಿ 45 ಜನರಲ್ಲಿ ಸೋಂಕು ದೃಢವಾಗಿದೆ. ಇವರಲ್ಲಿ ಬಹುತೇಕ ಎಲ್ಲರೂ ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ್ದು, ಅವರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.
ಇನ್ನು ಕೊರೊನಾದಿಂದ 17 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 588ಕ್ಕೆ ಏರಿದೆ. ರಾಜ್ಯದಲ್ಲಿ ಸೋಂಕಿಗೆ 41 ಮಂದಿ ಬಲಿಯಾಗಿದ್ದಾರೆ.
ಆತಂಕಕಾರಿ ವಿಷಯ ಏನಂದರೇ ಇಂದು ಸೋಂಕು ಪತ್ತೆಯಾದವರಲ್ಲಿ 10 ವರ್ಷದ ಒಳಗಿನ 7 ಮಕ್ಕಳಿದ್ದು, 41 ಜನ ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇಂದು ಚಿಕ್ಕಬಳ್ಳಾಪುರದಲ್ಲಿ 45, ಬೆಂಗಳೂರು ಗ್ರಾಮಾಂತರದಲ್ಲಿ 04, ಧಾರವಾಡದಲ್ಲಿ 02, ತುಮಕೂರಲ್ಲಿ 08, ಬಾಗಲಕೋಟೆಯಲ್ಲಿ 01, ಚಿಕ್ಕಮಗಳೂರಲ್ಲಿ 05, ಚಿತ್ರದುರ್ಗದಲ್ಲಿ 01, ದಾವಣಗೆರೆಯಲ್ಲಿ 03, ಬೆಂಗಳೂರು ನಗರದಲ್ಲಿ 05, ವಿಜಯಪುರದಲ್ಲಿ 02, ಬೀದರ್ ನಲ್ಲಿ 06,
ಬೆಳಗಾವಿಯಲ್ಲಿ 01, ಮಂಡ್ಯದಲ್ಲಿ 03, ಹಾವೇರಿಯಲ್ಲಿ 03, ಉತ್ತರ ಕನ್ನಡದಲ್ಲಿ 01, ದಕ್ಷಿಣ ಕನ್ನಡದಲ್ಲಿ 01, ಹಾಸನದಲ್ಲಿ 14 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.