ಮುಂಬೈ, ಜೂನ್ 2 : ಆಸ್ಪತ್ರೆಯ ವರಾಂಡಗಳಲ್ಲಿ ಎಲ್ಲಿ ನೋಡಿದರೂ ಶವಗಳ ರಾಶಿ, ವಾರ್ಡ್ ಗಳೆಲ್ಲಾ ಹೌಸ್ ಪುಲ್.. ಹಾಸಿಗೆ ಸಿಗದೆ ನೆಲದ ಮೇಲೆ ಒದ್ದಾಡುತ್ತಿರುವ ಕೊರೊನಾ ಸೋಂಕಿತರು, ಗಡಿಯಾರದಂತೆ 24 ಗಂಟೆಯೂ ಸೇವೆ ಮಾಡಿ ಹೈರಾಣಾಗಿರುವ ವೈದ್ಯರು, ನರ್ಸ್ ಗಳು. ಇದು ಯಾವುದೋ ದೇಶದ ಪರಿಸ್ಥಿತಿಯಲ್ಲ. ಭಾರತದ ವಾಣಿಜ್ಯ ನಗರವೆಂದು ಕರೆಯಲ್ಪಡುವ ಮುಂಬೈನ ಇಂದಿನ ಸ್ಥಿತಿ.
ಮಹಾರಾಷ್ಟದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ರಾಜ್ಯವನ್ನು ಕಂಗೆಡಿಸಿದೆ. ದಿನೇ ದಿನೇ ಏರುತ್ತಿರುವ ಕೊರೊನಾ ಪ್ರಕರಣಗಳ ಜೊತೆಗೆ ಆಸ್ಪತ್ರೆಗಳಲ್ಲಿ ಶವಗಳನ್ನು ಕೊಂಡೊಯ್ಯಲು ಮುಂದೆ ಬರದ ಕುಟುಂಬದವರು. ಮಹಾರಾಷ್ಟ್ರದ ವಾಣಿಜ್ಯ ನಗರ ಮುಂಬೈನ ಸ್ಥಿತಿ ಇಂದು ಕೆಲವು ತಿಂಗಳ ಹಿಂದೆ ನಾವು ಕೇಳುತ್ತಿದ್ದ ಇಟಲಿಯಂತಾಗಿದೆ.
ಕೊರೋನಾ ಹರಡುವ ಭೀತಿಯಿಂದ ಮುಂಬೈನ ಆಸ್ಪತ್ರೆಯಲ್ಲಿ ಶವಗಳನ್ನು ಕೊಂಡೊಯ್ಯಲು ಅವರ ಕುಟುಂಬದವರು ತಯಾರಿಲ್ಲದ ಕಾರಣ ಆಸ್ಪತ್ರೆಯ ವರಾಂಡಗಳಲ್ಲಿ ಶವಗಳು ರಾಶಿಬಿದ್ದಿದೆ. ಮೃತಪಟ್ಟವರಿಗೆ ಸಂಬಂಧಿಸಿದ ಕಾಗದ ಪತ್ರಗಳು ಸಿದ್ಧವಾಗಿದ್ದರೂ ಸೋಂಕು ತಗುಲುವ ಭಯದಿಂದ ಕುಟುಂಬಸ್ಥರು ಆಸ್ಪತ್ರೆಯತ್ತ ಬರುತ್ತಿಲ್ಲ ಎನ್ನುತ್ತಾರೆ ಕಿಂಗ್ ಎಡ್ವರ್ಡ್ ಸಾರ್ವಜನಿಕ ಆಸ್ಪತ್ರೆಯ ದಾದಿ ಮಾಧುರಿ ರಾಮದಾಸ್.
ಮುಂಬೈನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 40 ಸಾವಿರ ದಾಟಿದ್ದು, ಹೆಚ್ಚಿನ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಿಂತ ಎರಡು ಪಟ್ಟು ಕೊರೊನಾ ಸೋಂಕಿತರು ಚಿಕಿತ್ಸೆಗಾಗಿ ಸರದಿಯಲ್ಲಿ ಇದ್ದಾರೆ. ಒಂದು ಹಾಸಿಗೆ ಪಡೆಯಲು ಕಡಿಮೆ ಅಂದರೂ 16 ಗಂಟೆ ಕಾಯುವ ಪರಿಸ್ಥಿತಿ. ಇಡೀ ಆಸ್ಪತ್ರೆಯನ್ನು ಕೊರೊನಾ ಸೋಂಕಿತರಿಗಾಗಿ ಕೊರೊನಾ ವಾರ್ಡ್ ಮಾಡಲಾಗಿದ್ದರೂ ಕೊರೊನಾ ಸೋಂಕಿತರನ್ನು ನಿಯಂತ್ರಿಸಲಾಗದೆ ಆಸ್ಪತ್ರೆಗಳು ಅಸಹಾಯಕ ಸ್ಥಿತಿಗೆ ತಲುಪಿವೆ. ಇದೆಲ್ಲದರ ನಡುವೆಯೂ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ.
ಮೇ.27 ವರೆಗೆ ಬೃಹತ್ ಮುಂಬೈ ಪಾಲಿಕೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ಮುಂಬೈ ನಲ್ಲಿರುವ ಐಸಿಯು ಬೆಡ್ ಗಳ ಪೈಕಿ ಶೇ.99 ರಷ್ಟು ಭರ್ತಿಯಾಗಿವೆ.







