ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಸೋಂಕು ತಡೆಯುವ ಔಷಧಿ ಆದಷ್ಟು ಬೇಗ ಅಂದರೆ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ ಎಂದು ವಿಶ್ವದ ಅತಿದೊಡ್ಡ ವ್ಯಾಕ್ಸಿನ್ ತಯಾರಕ ಸಂಸ್ಥೆ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥರು ಅದಾರ್ ಪೂನಾವಾಲಾ ರಾಷ್ಟ್ರೀಯ ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಅಲ್ಲದೆ ಈ ಔಷಧಿಯ ದರವೂ ಒಂದು ಸಾವಿರ ರೂಪಾಯಿ ಆಗಬಹುದು ಎಂದಿದ್ದಾರೆ. ಔಷಧಿಗೆ ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷೆಗಳು ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಮುಕ್ತಾಯವಾಗಿ ಯಶಸ್ಸು ಕಂಡರೆ ನಾವು ಉತ್ಪನ್ನಗಳನ್ನು ಭಾರತ ಹಾಗೂ ಇಡೀ ವಿಶ್ವಕ್ಕೆ ನೀಡಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ಪುಣೆ ಮೂಲದ ಈ ಔಷಧಿ ಕಂಪನಿ, ಬ್ರಿಟನ್ ಹಾಗೂ ಅಮೆರಿಕಾದ ವಿಜ್ಞಾನಿಗಳ ಜೊತೆ ಒಪ್ಪಂದ ಮಾಡಿಕೊಂಡು ಕೊರೊನಾ ಸೋಂಕಿಗೆ ಔಷಧಿ ತಯಾರಿಸಲು ಪ್ರಯತ್ನಿಸುತ್ತಿದೆ. ಆಕ್ಸ್ ಪರ್ಡ್ ಯೂನಿವರ್ಸಿಟಿಯ ಜೊತೆಗೆ ಒಪ್ಪಂದ ಮಾಡಿಕೊಳ್ಳುವುದಕ್ಕೂ ಮೊದಲು ಈ ಕಂಪನಿ ಕೂಡ ಕೊರೊನಾ ಸೋಂಕಿನ ಔಷಧಿ ತಯಾರಿಕೆಗೆ ಒಂದು ವರ್ಷಗಳ ಸಮಯ ಬೇಕಿದೆ ಎಂದುಕೊಂಡಿತ್ತು. ಆದರೆ ಕಳೆದ ವಾರ ವಿವಿ ಜೊತೆಗೆ ಒಪ್ಪಂದ ಆದ ಬಳಿಕ, ಈ ಪ್ರಯೋಗದಲ್ಲಿ ಸಾಕಷ್ಟು ಬದಲಾವಣೆಗೆ ಆಗಿದೆ ಅಂತಾ ಅದಾರ್ ಅವರು ತಿಳಿಸಿದ್ದಾರೆ.








