ಹೊಸದಿಲ್ಲಿ, ಜೂನ್ 2 : ಭಾರತದ ವೈದ್ಯಕೀಯ ಸಂಶೋಧನಾ ಸಮಿತಿಯ ಹಿರಿಯ ವಿಜ್ಞಾನಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮುಂಬೈನಿಂದ ದೆಹಲಿಗೆ ಎರಡು ವಾರಗಳ ಹಿಂದೆ ವಾಪಸ್ಸಾದ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಯ ಹಿರಿಯ ವಿಜ್ಞಾನಿಯಲ್ಲಿ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.
ಕೆಲ ದಿನಗಳ ಹಿಂದೆ ದಿಲ್ಲಿಗೆ ಆಗಮಿಸಿದ್ದ ಅವರಲ್ಲಿ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿತ್ತು. ಅವರ ವೈದ್ಯಕೀಯ ವರದಿಯು ರವಿವಾರ ದೊರೆತಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮುಂಬೈ ಐಸಿಎಂಆರ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಿಪ್ರೊಡಕ್ಟಿವ್ ಹೆಲ್ತ್ ನಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ದೆಹಲಿಯಿಂದ ವಾಪಸ್ಸಾದ ಬಳಿಕ ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಂ ಭಾರ್ಗವ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದ ಸಭೆಯಲ್ಲಿ ಭಾಗವಹಿಸಿದ್ದರು.
ಇದೀಗ ಸಂಪೂರ್ಣ ಐಸಿಎಂಆರ್ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಕೊರೊನಾ ವೈರಸ್ ಔಷಧಿ ಸಂಶೋಧನೆಗೆ ಸಂಬಂಧಿಸಿ ಕೆಲವು ಅಗತ್ಯ ಸಿಬ್ಬಂದಿಗಳಿಗೆ ಅನಿವಾರ್ಯವಿದ್ದಲ್ಲಿ ಮಾತ್ರ ಐಸಿಎಂಆರ್ ಕಟ್ಟಡದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು ಉಳಿದ ಎಲ್ಲರಿಗೂ ನಿರ್ಬಂಧ ಹೇರಲಾಗಿದೆ.ಉಳಿದ ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ. ಇದೇ ವೇಳೆ ಸಿಆರ್ ಪಿಎಫ್ ಅಧಿಕಾರಿಯಲ್ಲಿ ಕೂಡ ಸೋಂಕು ಪತ್ತೆಯಾಗಿದೆ.