ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕೊರೋನಾ ಸೋಂಕು
ಹೈದರಾಬಾದ್, ಜುಲೈ 29: ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕೋವಿಡ್-19 ದೃಢಪಟ್ಟಿದೆ. ಬಾಹುಬಲಿ ನಿರ್ದೇಶಕರು ಬುಧವಾರ ಟ್ವಿಟರ್ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದು, ತಾನು ಮತ್ತು ತನ್ನ ಕುಟುಂಬವು ಹೋಂ ಕ್ವಾರಂಟೈನ್ ನಲ್ಲಿ ಇರುವುದಾಗಿ ರಾಜಮೌಳಿ ಹೇಳಿದ್ದಾರೆ.
‘ನನ್ನ ಕುಟುಂಬ ಸದಸ್ಯರು ಮತ್ತು ನಾನು ಕೆಲವು ದಿನಗಳ ಹಿಂದೆ ಸ್ವಲ್ಪ ಜ್ವರದಿಂದ ಬಳಲುತ್ತಿದ್ದೆವು. ಅದು ಸ್ವತಃ ಕಡಿಮೆಯಾದರೂ ನಾವು ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡೆವು. ಫಲಿತಾಂಶವು ಇಂದು ಕೋವಿಡ್ ಸೋಂಕು ದೃಢಪಟ್ಟಿರುವುದನ್ನು ತೋರಿಸಿದೆ. ವೈದ್ಯರು ಸೂಚಿಸಿದಂತೆ ನಾವು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅವರು ಮತ್ತೊಂದು ಟ್ವೀಟ್ ಮಾಡಿ, ‘ನಾವೆಲ್ಲರೂ ಯಾವುದೇ ರೋಗಲಕ್ಷಣಗಳಿಲ್ಲದೆ ಉತ್ತಮವಾಗಿದ್ದೇವೆ ಆದರೆ ಎಲ್ಲಾ ಮುನ್ನೆಚ್ಚರಿಕೆಗಳು ಮತ್ತು ಸೂಚನೆಗಳನ್ನು ಅನುಸರಿಸುತ್ತಿದ್ದೇವೆ… ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲು ಕಾಯುತ್ತಿದ್ದೇವೆ. ಇದರಿಂದ ನಾವು ನಮ್ಮ ಪ್ಲಾಸ್ಮಾವನ್ನು ದಾನ ಮಾಡಬಹುದು …’ ಎಂದೂ ಟ್ವೀಟ್ ಮಾಡಿದ್ದಾರೆ.