ಡೊನಾಲ್ಡ್ ಟ್ರಂಪ್ ಮಗನ ಗೆಳತಿಗೆ ಕೊರೊನಾ ಸೋಂಕು
ವಾಷಿಂಗ್ಟನ್, ಜುಲೈ 5: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಗೆಳತಿಗೆ ಕೊರೊನಾ ವೈರಸ್ ಧೃಡ ಪಟ್ಟಿದೆ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ.
ಡೊನಾಲ್ಡ್ ಟ್ರಂಪ್ ಜೂನಿಯರ್ ಜೊತೆ ಡೇಟಿಂಗ್ ಮಾಡುತ್ತಿರುವ ಕಿಂಬರ್ಲಿ ಗಿಲ್ಫಾಯ್ಲ್, ಯು.ಎಸ್. ಅಧ್ಯಕ್ಷರ ಜುಲೈ ನಾಲ್ಕನೆಯ ಭಾಷಣ ಮತ್ತು ಮೌಂಟ್ ರಶ್ಮೋರ್ನಲ್ಲಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ದಕ್ಷಿಣ ಡಕೋಟಾಗೆ ಪ್ರಯಾಣಿಸಿದ್ದರು.
51 ರ ಹರೆಯದ ಗಿಲ್ಫಾಯ್ಲ್ ಅವರಿಗೆ ಅಧ್ಯಕ್ಷರನ್ನು ಭೇಟಿ ಮಾಡುವ ಮೊದಲು ನಡೆಸುವ ವಾಡಿಕೆಯ ಕೊರೊನಾ ಪರೀಕ್ಷೆಯಲ್ಲಿ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಯಿತು ಎಂದು ವರದಿಗಳು ತಿಳಿಸಿದ್ದು, ಆಕೆಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಹೇಳಿವೆ.
ಟ್ರಂಪ್ ಅಭಿಯಾನದ ಹಣಕಾಸು ಸಮಿತಿಯ ಮುಖ್ಯಸ್ಥ ಸೆರ್ಗಿಯೋ ಗೋರ್ ಅವರು ಪತ್ರಿಕೆಯೊಂದಕ್ಕೆ ಈ ಕುರಿತು ಹೇಳಿಕೆ ನೀಡಿದ್ದು, ಅವಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೊರೊನಾ ಸೋಂಕಿನ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲ. ಹಾಗಾಗಿ ಸೋಂಕು ತಗುಲಿರುವುದನ್ನು ಖಚಿತಪಡಿಸಿಕೊಳ್ಳಲು ಮರುಪರಿಶೀಲಿಸಲಾಗುವುದು ಎಂದು ಹೇಳಿದರು. ಆಕೆಯ ಜೊತೆಯಲ್ಲಿದ್ದ ಡೊನಾಲ್ಡ್ ಟ್ರಂಪ್ ಅವರ ಮಗನಿಗೂ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಅವರಿಗೆ ಕೊರೋನಾ ಸೋಂಕು ತಗುಲಿಲ್ಲ.
ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಅವರು ಕೂಡ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ ಎಂದು ಅವರು ಹೇಳಿದರು.