ಪುತ್ತೂರು ನಗರಸಭಾ ಸದಸ್ಯೆಯ ಮಾವನಿಗೆ ಕೊರೊನಾ ಸೋಂಕು
ಪುತ್ತೂರು, ಜೂನ್ 21: ಕೊರೊನಾ ಸೋಂಕು ದಕ್ಷಿಣ ಕನ್ನಡದಲ್ಲಿ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಪುತ್ತೂರಿನ ನಗರಸಭೆ ಸದಸ್ಯೆಯೊಬ್ಬರ ಮಾವನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಚಿಕ್ಕ ಮುಡ್ನೂರು ರಾಗಿದಕುಮೇರು ನಿವಾಸಿಯಾಗಿರುವ ಸುಮಾರು 70 ವರ್ಷದ ವಯೋಮಾನದ ಇವರು ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಜೂನ್ 18ರಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಇವರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಕೊರೊನಾ ಪರೀಕ್ಷೆಗೆ ಕಳುಹಿಸಿ, ಬಳಿಕ ಅವರಿಗೆ ಔಷಧಿ ನೀಡಿ ಮನೆಗೆ ಕಳುಹಿಸಲಾಗಿತ್ತು. ಜೂನ್ 20ರಂದು ಅವರ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಬಂದಿದ್ದು, ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಅವರನ್ನು ಮಂಗಳೂರಿನ ವೆನ್ ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಗರಸಭಾ ಸದಸ್ಯೆಯ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಕೊರೊನಾ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಕೊರೊನಾ ಸೋಂಕು ದೃಢಪಟ್ಟಿರುವ ವ್ಯಕ್ತಿ ಹಲವಾರು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದಾಗಿ ಮನೆಯಲ್ಲೇ ಇದ್ದು, ಜೂನ್ 18ರಂದು ತೀವ್ರ ಜ್ವರದ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಗೆ ಮಾತ್ರ ಹೋಗಿದ್ದರು. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ಹೇಗೆ ಎಂಬ ಪ್ರಶ್ನೆ ಉದ್ಬವಿಸಿದ್ದು, ಇದೀಗ ಅಧಿಕಾರಿಗಳು ಸೋಂಕಿನ ಮೂಲ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿಯ ಮನೆಯಲ್ಲಿ ಸೆಂಟ್ರಿಂಗ್ ಕಾಂಟ್ರಾಕ್ಟ್ ಕೆಲಸ ನಿರ್ವಹಿಸುವ ಮಗ, ನಗರಸಭಾ ಸದಸ್ಯೆ ಸೊಸೆ, ಇಬ್ಬರು ಮೊಮ್ಮಕ್ಕಳು ಮತ್ತು ಪತ್ನಿಯಿದ್ದಾರೆ. ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಸೀಲ್ ಡೌನ್ ಆದ ಕರಾಯ ಭಾಗದ ಸಂಬಂಧಿಯೊಬ್ಬರು ಇವರ ಮನೆಗೆ ಬಂದಿದ್ದರು ಎಂದು ಹೇಳಲಾಗುತ್ತಿದ್ದು, ಅವರಿಂದ ಸೋಂಕು ತಗುಲಿರಬಹುದೇ ಎಂದೂ ಮಾಹಿತಿ ಕಲೆ ಹಾಕಲಾಗುತ್ತಿದೆ.
ನಗರಸಭಾ ಸದಸ್ಯೆಯ ಮಾವನಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಪುತ್ತೂರಿನ ಜನಪ್ರತಿನಿಧಿಗಳು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ನಗರಸಭಾ ಸದಸ್ಯೆ, ಸೋಂಕು ಪತ್ತೆಯಾಗಿರುವ ಅವರ ಮಾವ ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿರುವ ಹಿನ್ನಲೆಯಲ್ಲಿ ಸೋಂಕು ಮನೆಯ ಇತರೆ ಸದಸ್ಯರಿಗೂ ಹರಡಿರುವ ಸಾಧ್ಯತೆ ಇದ್ದು, ಕೆಲವು ದಿನಗಳ ಹಿಂದೆ ನಗರಸಭಾ ಸದಸ್ಯೆ ಭಾಗವಹಿಸಿದ್ದ ವಿವಿಧ ಕಾಮಗಾರಿ ಶಿಲಾನ್ಯಾಸ, ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜನಪ್ರತಿನಿಧಿಗಳು, ಸಾರ್ವಜನಿಕರಿಗೆ ಇದೀಗ ಕೊರೊನಾ ಸೋಂಕು ಆತಂಕ ಎದುರಾಗಿದೆ.