ಟ್ರಂಪ್ ಚುನಾವಣಾ ಪ್ರಚಾರ ತಂಡದ ಸದಸ್ಯರಿಗೆ ಕೊರೊನಾ ಸೋಂಕು
ವಾಷಿಂಗ್ಟನ್, ಜೂನ್ 22: ಡೊನಾಲ್ಡ್ ಟ್ರಂಪ್‌ರ ಚುನಾವಣಾ ಪ್ರಚಾರ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ತಂಡದ ಆರು ಸದಸ್ಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಶನಿವಾರ ಅಮೆರಿಕದ ಓಕ್ಲಹಾಮದ ಟಲ್ಸದಲ್ಲಿ ನಡೆದ ಟ್ರಂಪ್‌ರ ಚುನಾವಣಾ ಪ್ರಚಾರ ಕಾರ್ಯಕ್ರಮದ ಉಸ್ತುವಾರಿಯನ್ನು ಇವರು ಹೊತ್ತಿದ್ದರು. ಚುನಾವಣಾ ಪ್ರಚಾರದ ಹೊಣೆ ಹೊತ್ತ ತಂಡ ತನ್ನ ತಂಡದಲ್ಲಿನ ಆರು ಮಂದಿಗೆ ಕೊರೊನಾ ಸೋಂಕು ತಗುಲಿರುವುದನ್ನು ಧೃಡ ಪಡಿಸಿದೆ. ಶನಿವಾರದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸುವ ಕೆಲವು ಗಂಟೆಗಳ ಮೊದಲು ತಂಡದ ಸದಸ್ಯರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಅಮೆರಿಕದಲ್ಲಿ ಕೊರೊನಾ ಸೋಂಕು ವೈರಸ್ ವ್ಯಾಪಕವಾಗಿ ಹರಡಿರುವ ಹಿನ್ನಲೆಯಲ್ಲಿ ಹಲವು ತಿಂಗಳ ಕಾಲ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗಷ್ಟೇ ಚುನಾವಣಾ ಪ್ರಚಾರಕ್ಕೆ ಪುನರ್ ಚಾಲನೆ ನೀಡಲಾಗಿದ್ದು, ಉದ್ದೇಶಿತ ಕಾರ್ಯಕ್ರಮವು ಸ್ಥಗಿತಗೊಂಡ ಬಳಿಕದ ಮೊದಲನೆ ಕಾರ್ಯಕ್ರಮವಾಗಿತ್ತು.
ಟ್ರಂಪ್ ರ ಚುನಾವಣಾ ಪ್ರಚಾರ ತಂಡದ ಸದಸ್ಯರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಅವರ ಟೀಕಾಕಾರರು ಟ್ರಂಪ್ ರ ಚುನಾವಣಾ ಪ್ರಚಾರ ಕಾರ್ಯಕ್ರಮವು ಕೊರೋನ ವೈರಸ್‌ನ ‘ಸೂಪರ್ ಸ್ಪ್ರೆಡರ್’ (ಸೋಂಕನ್ನು ಅತಿ ಶೀಘ್ರವಾಗಿ ಹರಡುವ) ಕಾರ್ಯಕ್ರಮವಾಗಬಹುದಾಗಿದೆ ಎಂದು ಟೀಕಿಸಿದ್ದಾರೆ.
ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಸುರಕ್ಷತಾ ಕ್ರಮಗಳಂತೆ ಕಾರ್ಯಕ್ರಮಕ್ಕೆ ಮೊದಲೇ ಅಭಿಯಾನ ಸಿಬ್ಬಂದಿಗಳನ್ನು ಕೊರೊನಾ ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಟ್ರಂಪ್ ಚುನಾವಣಾ ಅಭಿಯಾನದ ಸಂವಹನ ನಿರ್ದೇಶಕ ಟಿಮ್ ಮರ್ಟಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಈಗಾಗಲೇ ನೂರಾರು ಪರೀಕ್ಷೆಗಳನ್ನು ನಡೆಸಲಾಗಿದ್ದು, ತಂಡದ ಆರು ಸದಸ್ಯರಲ್ಲಿ ಸೋಂಕು ಪತ್ತೆಯಾಗಿದ್ದು, ಅವರನ್ನು ಕೂಡಲೇ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಟಿಮ್ ಮರ್ಟಾ ತಿಳಿಸಿದ್ದಾರೆ.