ಚೆನ್ನೈ, ಮೇ 27 : ನೆರೆ ರಾಜ್ಯ ತಮಿಳುನಾಡಿನಲ್ಲಿ ಕೊರೊನಾ ಸೋಂಕು ವೇಗವಾಗಿ ಹಬ್ಬುತ್ತಿದ್ದು, ನೋಕಿಯಾ ಫೋನ್ ತಯಾರಿಕಾ ಘಟಕದ 49 ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಡೀ ನೋಕಿಯಾ ಫೋನ್ ತಯಾರಿಕಾ ಘಟಕವನ್ನು ಸ್ಥಗಿತಗೊಳಿಸಲಾಗಿದೆ.
ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ನೋಕಿಯಾ ಫೋನ್ ತಯಾರಿಕಾ ಘಟಕವನ್ನು ಕಳೆದ ವಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಾರ್ಯಾರಂಭ ಮಾಡಲಾಗಿತ್ತು. ಇದೀಗ ನೌಕರರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ನೋಕಿಯಾ ಕಂಪನಿ ತಿಳಿಸಿದೆ.
ಅತಿ ಶೀಘ್ರದಲ್ಲಿ ಅಗತ್ಯ ಸುರಕ್ಷಿತ ಕ್ರಮಗಳೊಂದಿಗೆ ಘಟಕವನ್ನು ಪುನರ್ ಆರಂಭ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
ಈ ಮೊದಲು ದೆಹಲಿಯಲ್ಲಿರುವ ಒಪ್ಪೊ ಮೊಬೈಲ್ ತಯಾರಿಕಾ ಕಂಪನಿಯ 9 ನೌಕರರಲ್ಲಿ ಕೂಡ ಕೊರೊನಾ ಸೋಂಕು ದೃಢಪಟ್ಟಿದ್ದು, ಘಟಕದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.








