ಸಮಾಜವಾದಿ ಪಕ್ಷದ ಮಾಜಿ ಸಂಸದರಿಗೆ ಕೊರೊನಾ ಸೋಂಕು
ಲಕ್ನೋ, ಜೂನ್ 15: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸಂಬಂಧಿ, ಸಮಾಜವಾದಿ ಪಕ್ಷದ ಮಾಜಿ ಸಂಸದ ಧರ್ಮೇಂದ್ರ ಯಾದವ್ ಅವರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಯಾದವ್ ಅವರಿಗೆ ಶನಿವಾರ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಇಟವಾದಲ್ಲಿನ ಸೆಫೈ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಾಜಿ ಸಂಸದ ಧರ್ಮೇಂದ್ರ ಯಾದವ್ ಅವರು ಜ್ವರದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಅವರನ್ನು ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷಾ ವರದಿಯಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಜಿ ಸಂಸದರೊಂದಿಗೆ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುತ್ತಿದ್ದು, ಅವರನ್ನೆಲ್ಲಾ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತದೆ.
16 ನೇ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಬಾದೌನ್ ಕ್ಷೇತ್ರದಿಂದ ಧರ್ಮೇಂದ್ರ ಯಾದವ್ ಅವರು ಸಂಸತ್ ಸದಸ್ಯರಾಗಿದ್ದರು. ಇದರ ಮೊದಲು ಕೂಡ ಎರಡು ಬಾರಿಗೆ ಅವರು ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ಉತ್ತರ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಏರಿಕೆ ಕಾಣುತ್ತಿದ್ದು, ಇಲ್ಲಿಯವರೆಗೆ ಒಟ್ಟು ಪ್ರಕರಣಗಳು 13,118 ಕ್ಕೆ ತಲುಪಿದೆ. ಒಟ್ಟು ಪ್ರಕರಣಗಳಲ್ಲಿ 4,858 ಸಕ್ರಿಯ ಕೊರೊನಾ ಪ್ರಕರಣಗಳಿದ್ದರೆ, 7,875 ಜನರು ಈಗಾಗಲೇ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದುವರೆಗೆ ಉತ್ತರ ಪ್ರದೇಶದಲ್ಲಿ 385 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.