ಹೊಸದಿಲ್ಲಿ, ಮೇ 31 : ಭಾರತದ ಹಾಕಿ ಇಂಡಿಯಾ ಪ್ರಧಾನ ಕಚೇರಿಯ ಇಬ್ಬರು ಸಿಬ್ಬಂದಿಗಳಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಕೊರೋನಾ ಸೋಂಕು ದೃಢಪಟ್ಟ ಸಿಬ್ಬಂದಿಗಳಲ್ಲಿ ಒಬ್ಬರು ಲೆಕ್ಕ ವಿಭಾಗದ ಉದ್ಯೋಗಿಯಾಗಿದ್ದರೆ, ಮತ್ತೊಬ್ಬರು ಕಿರಿಯ ಫೀಲ್ಡ್ ಆಫೀಸರ್ ಆಗಿದ್ದಾರೆ. ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಹಾಕಿ ಇಂಡಿಯಾ ಪ್ರಧಾನ ಕಚೇರಿಯನ್ನು ಎರಡು ವಾರಗಳವರೆಗೆ ಮುಚ್ಚಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಭಾರತದ ಹಾಕಿ ಇಂಡಿಯಾ ಪ್ರಧಾನ ಕಚೇರಿಯ 31 ಸಿಬ್ಬಂದಿಗಳ ಪೈಕಿ 29 ಮಂದಿಯನ್ನು ಪರೀಕ್ಷಿಸಲಾಗಿದ್ದು, ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇನ್ನಿಬ್ಬರ ವರದಿ ಬಂದಿಲ್ಲ. ಇದೀಗ ಇಬ್ಬರು ಉದ್ಯೋಗಿಗಳಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಎಲ್ಲಾ ಸಿಬ್ಬಂದಿಗಳಿಗೂ ಕಡ್ಡಾಯವಾಗಿ 14 ದಿನಗಳ ಹೋಂ ಕ್ವಾರಂಟೀನ್ ಗೆ ಒಳಗಾಗುವಂತೆ ಸೂಚಿಸಲಾಗಿದೆ ಭಾರತದ ಹಾಕಿ ಇಂಡಿಯಾ ಅಧ್ಯಕ್ಷ ಮುಷ್ತಾಕ್ ಅಹ್ಮದ್ ಅವರಿಗೆ 14 ದಿನಗಳ ಸಮಯ ಪ್ರಧಾನ ಕಚೇರಿಯನ್ನು ಮುಚ್ಚುವ ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ ಅವರು ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗಳು ಮತ್ತು ರಾಜ್ಯ ಒಲಿಂಪಿಕ್ ಸಂಘಗಳು ತಮ್ಮ ನೌಕರರನ್ನು ತಡಮಾಡದೆ ಮಾರಕ ಕೊರೊನಾ ವೈರಸ್ ಸೋಂಕಿನ ಪರೀಕ್ಷೆಗೆ ಒಳಪಡಿಸಬೇಕೆಂದು ಸೂಚಿಸಿದ್ದಾರೆ. ಭಾರತದಲ್ಲಿ ಇಲ್ಲಿಯವರೆಗೆ 1.7 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದ್ದರೆ, 5000 ಹೆಚ್ಚು ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.








