ಡೆಹ್ರಾಡೂನ್, ಮೇ 31 : ಉತ್ತರಾಖಂಡದ ಕ್ಯಾಬಿನೆಟ್ ಸಚಿವ ಸತ್ಪಾಲ್ ಮಹಾರಾಜ್ ಅವರ ಪತ್ನಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಮಹಾರಾಜ್ ಅವರ ಪತ್ನಿ ಅಮೃತಾ ರಾವತ್ ಅವರಿಗೆ ಶನಿವಾರ ಡೆಹ್ರಾಡೂನ್ ನಲ್ಲಿನ ಖಾಸಗಿ ಲ್ಯಾಬ್ ವೊಂದರಲ್ಲಿ ಕೊರೊನಾ ಪರೀಕ್ಷೆ ನಡೆಸಲಾಯಿತು. ಇದೀಗ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಚಿವ ಸತ್ಪಾಲ್ ಮಹಾರಾಜ್ ಮತ್ತು ನಿವಾಸದಲ್ಲಿ ವಾಸಿಸುತ್ತಿದ್ದ ಇತರ 41 ಜನರ ಕೊರೊನಾ ಪರೀಕ್ಷೆ ನಡೆಸಿದ್ದು, ನಂತರ ಎಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಪತ್ನಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿರುವ ಉತ್ತರಾಖಂಡ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್, ನನ್ನ ಹೆಂಡತಿಗೆ ಕಳೆದ ಮೂರು ನಾಲ್ಕು ದಿನಗಳಿಂದ ಜ್ವರ ಬರುತ್ತಿತ್ತು. ಹಾಗಾಗಿ ಮೊದಲಿಗೆ ಖಾಸಗಿ ಲ್ಯಾಬ್‌ನಲ್ಲಿ ರೋಗನಿರೋಧಕ ಪರೀಕ್ಷೆಯನ್ನು ನಡೆಸಿದ್ದೇವೆ. ಅದರಲ್ಲಿ ನೆಗೆಟಿವ್ ಎಂದು ವರದಿ ಬಂತು. ಆದರೆ ಜ್ವರ ಕಡಿಮೆಯಾಗದ ಹಿನ್ನಲೆಯಲ್ಲಿ ಶನಿವಾರ ಅವಳ ಸ್ವ್ಯಾಬ್ ಮಾದರಿಗಳನ್ನು ತೆಗೆದುಕೊಂಡು ಕೊರೊನಾ ಪರೀಕ್ಷೆ ನಡೆಸಲಾಯಿತು. ಅದರಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತು ಎಂದು ಹೇಳಿದರು.
ಮೇ 29 ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸತ್ಪಾಲ್ ಮಹಾರಾಜ್ ಭಾಗವಹಿಸಿದ್ದು, ಸಭೆಯಲ್ಲಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡ ಭಾಗವಹಿಸಿದ್ದರು. ಕೊರೊನಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅಮೃತಾ ರಾವ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶಿಷ್ ಶ್ರೀವಾಸ್ತವ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ .








