ಬೆಂಗಳೂರು: ಜನರು ತಾವಾಗಿಯೇ ಈ ರೋಗವನ್ನು ಅಂಟಿಸಿಕೊಂಡಿಲ್ಲ, ಸರ್ಕಾರವೇ ಅಂಟಿಸಿರೋದು, ಹೀಗಾಗಿ ಎಲ್ಲರಿಗೂ ವಿಮೆ ಮಾಡಿಸಬೇಕು. ಅಲ್ಲದೆ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಐಇಸಿ ಕೇಂದ್ರದಲ್ಲಿ ಬೆಡ್ ಗಳನ್ನ ಬಾಡಿಗೆ ಪಡೆದುಕೊಂಡಿರೋದನ್ನ ಪ್ರಸ್ತಾಪಿಸುತ್ತಾ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅನೇಕ ಭ್ರಷ್ಟಾಚಾರ ನಡೆದಿದೆ. ಮೆಡಿಕಲ್ ಕಿಟ್ ಖರೀದಿಯಲ್ಲೂ ಅವ್ಯವಹಾರ ಆಗಿತ್ತು, ಈಗ 10,000 ಬೆಡ್ ಬಾಡಿಗೆ ಪಡೆಯೋದರಲ್ಲಿ ಹಗರಣ ಆಗಿದೆ. ಹಾಸಿಗೆ, ದಿಂಬಿನಲ್ಲಿ ಹಗರಣ ಮಾಡಿದ್ದಾರೆ ಎಂದು ಆರೋಪಿಸಿದ ಡಿಕೆಶಿ, ಮಖ್ಯಮಂತ್ರಿಗಳು ಬಾಡಿಗೆ ಬೇಡ, ಖರೀದಿ ಮಾಡಿ ಅಂದ್ರು. ಸರ್ಕಾರದಲ್ಲಿ ನಡೆದಿರುವ ಹಗರಣದ ಬಗ್ಗೆ ಇದಕ್ಕಿಂತಲೂ ಸಾಕ್ಷಿ ಬೇಕೇ ಎಂದು ಕುಟುಕಿದರು.
ಮುಂದುವರಿದು, ಕೊರೊನಾ ಸೋಂಕನ್ನ ನಿಯಂತ್ರಣ ಮಾಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿವೆ ಎಂದು ಗುಡುಗಿದ ಟ್ರಬಲ್ ಶೂಟರ್, ಕೊರೊನಾ ವಿಚಾರದಲ್ಲಿ ಸರ್ಕಾರಕ್ಕೆ ಪ್ರತಿಪಕ್ಷದವರು ಬೆಂಬಲ ನೀಡುತ್ತ ಬಂದಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸೇರಿ ಎಲ್ಲ ಕ್ಷೇತ್ರಗಳು ಕುಸಿದಿವೆ. ರಾಜ್ಯ ಸರಕಾರ ಇದರ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಮಂತ್ರಿಗಳ ನಡುವೆ ಸಮನ್ವಯತೆ ಇಲ್ಲದೆ ಗೊಂದಲದ ಗೂಡಾಗಿದೆ. ಜನರನ್ನ ಉಳಿಸಿ, ಶಕ್ತಿ ನೀಡಿ ಎಂದು ಆಗ್ರಹಿಸಿದರು.








